ಲೋಕಬಂಧು ನ್ಯೂಸ್, ಉಡುಪಿ
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬೆಳೆವಣಿಗೆ ಜೊತೆಗೆ ಪಠ್ಯೇತರವಾಗಿಯೂ ಪರಿಪೂರ್ಣತೆ ಸಾಗಿಸಲು ಸಮಾನಾಂತರ ಅಧ್ಯಯನವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕು. ಮಕ್ಕಳಲ್ಲಿರುವ ಅಪಾರವಾದ ಪ್ರತಿಭೆಗಳು ಹೊರಹೊಮ್ಮಬೇಕು, ಅವರ ಜ್ಞಾನಶಕ್ತಿ ಮುಪ್ಪುರಿಗೊಳ್ಳಬೇಕು, ಸೃಜನಶೀಲತೆ ಮೈಗೂಡಿಸಿಕೊಳ್ಳಬೇಕು, ಶಾಲೆಯ ವಾರ್ಷಿಕ ಪರೀಕ್ಷೆಯಲ್ಲಿ ಮಾತ್ರವಲ್ಲ ಬದುಕಿನ ಪರೀಕ್ಷೆಯನ್ನೂ ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸವನ್ನು ಬಾಲ್ಯದಲ್ಲಿಯೇ ಬೆಳೆಸಿಕೊಳ್ಳಬೇಕು ಎಂದು ಕಡಿಯಾಳಿ ದೇವಳ ಆಡಳಿತ ಸಮಿತಿ ಅಧ್ಯಕ್ಷ ವಿಜಯರಾಘವ ರಾವ್ ಹೇಳಿದರು.ರೋಟರಿ ಉಡುಪಿ ಆಶ್ರಯದಲ್ಲಿ ನಡೆದ ವಿಕಾಸ ಮಕ್ಕಳ ಬೌದ್ಧಿಕ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೋಟರಿ ಉಡುಪಿ ಅಧ್ಯಕ್ಷ ಸೂರಜ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ್ ಕೋಟಿಯಾನ್ ವಂದಿಸಿದರು.
ಬಳಿಕ ನಡೆದ ವಿವಿಧ ಗೋಷ್ಠಿಗಳಲ್ಲಿ ತರಬೇತುದಾರ ಮನೋಜ್ ಕಡಬ `ವ್ಯಕ್ತಿತ್ವ ವಿಕಸನ`, ಉಡುಪಿ ಡಯಟ್ ಸಂಸ್ಥೆಯ ಉಪನ್ಯಾಸಕ ಯೋಗಾನರಸಿಂಹ ಸ್ವಾಮಿ `ವೃತ್ತಿ ಮಾರ್ಗದರ್ಶನ`, ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ `ಪರೀಕ್ಷಾ ತಯಾರಿ ಮತ್ತು ವ್ಯಸನ ಮುಕ್ತ ಜೀವನ' ಹಾಗೂ ಡಾ.ವೈ.ಸುದರ್ಶನ ರಾವ್ `ಆರೋಗ್ಯ ಮತ್ತು ನೈರ್ಮಲ್ಯ' ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ರೋಟರಿಯ ಪೂರ್ವಾಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಸಮನ್ವಯಕಾರರಾಗಿದ್ದರು. ಇಂಟರಾಕ್ಟ್ ಸಭಾಪತಿ ಮಾಲತಿ ಮೋಹನ, ಕಾರ್ಯಕರ್ತರಾದ ಗೋಪಾಲಕೃಷ್ಣ ಪ್ರಭು, ಗಣಪತಿ ಪ್ರಭು, ಅಮಲ, ಐ.ಕೆ. ಜಯಚಂದ್ರ, ರಾಮಚಂದ್ರ ಉಪಾಧ್ಯಾಯ, ಗುರುರಾಜ ಭಟ್, ರಾಮಚಂದ್ರ ಐತಾಳ್, ದಯಾನಂದ ಶೆಟ್ಟಿ ಮತ್ತು ಶುಭ ಎಸ್. ಬಾಸ್ರಿ ಮೊದಲಾದವರಿದ್ದರು.