ಲೋಕಬಂಧು ನ್ಯೂಸ್, ಉಡುಪಿ
ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ದಿನ ಅಂಗವಾಗಿ ಬುಧವಾರ ಬ್ಯಾಂಕಿನ ಉಡುಪಿ ವಲಯ ಕಚೇರಿ ವತಿಯಿಂದ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ ಮತ್ತು ಎನ್.ಸಿ.ಡಿ. ವಿಭಾಗ ಹಾಗೂ ಗಾಂಧಿ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಗರದ ಅಂಬಾಗಿಲಿನಲ್ಲಿರುವ ಕರ್ಣಾಟಕ ಬ್ಯಾಂಕಿನ ಉಡುಪಿ ವಲಯ ಕಚೇರಿಯಲ್ಲಿ ನಡೆಯಿತು.ಶಿಬಿರದಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ, ಇಸಿಜಿ, ದಂತ ತಪಾಸಣೆ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಬ್ಯಾಂಕಿನ ನಿರ್ದೇಶಕ ಬಾಲಕೃಷ್ಣ ಅಲ್ಸೆ, ಬ್ಯಾಂಕಿನ ಸಿಬಂದಿಗಳು ರಕ್ತದಾನದಲ್ಲಿ ಪಾಲ್ಗೊಂಡು ಅಗತ್ಯವುಳ್ಳವರಿಗೆ ನೆರವಾಗುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.
ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಎಚ್.ಅಶೋಕ್ ಮಾತನಾಡಿ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ.
ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತ್ಯಗತ್ಯವಾಗಿದ್ದು, ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದರು.
ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಮಾತನಾಡಿ, ಜನಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಅದನ್ನು ಹೋಗಲಾಡಿಸಬೇಕು. ನಿಯಮಿತ ರಕ್ತದಾನದ ಮಾಹಿತಿ ನೀಡಿ, ಶಿಬಿರ ಆಯೋಜಿಸಬೇಕು ಎಂದರು.
ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ರಮೇಶ್ ವೈದ್ಯ, ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯ ಬಿದ್ದಾಗ ಬ್ಲಡ್ ಬ್ಯಾಂಕ್ ಗಳನ್ನೇ ಮೊರೆಹೋಗಬೇಕಾಗುತ್ತದೆ. ಕಳೆದ ಎರಡು ವರ್ಷಗಳಿಂದ ಕರ್ಣಾಟಕ ಬ್ಯಾಂಕ್ ರಕ್ತದಾನ ಮತ್ತು ಆರೋಗ್ಯ ಶಿಬಿರ ಆಯೋಜಿಸುತ್ತಾ ಬಂದಿದೆ ಎಂದರು.
ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ವೀಣಾಕುಮಾರಿ ರಕ್ತದಾನದ ಮಹತ್ವ ಮತ್ತು ರಕ್ತದಾನದ ಕ್ರಮದ ಬಗ್ಗೆ ವಿವರಿಸಿದರು. ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಇದ್ದರು.