ಪತ್ರಕರ್ತರ 40ನೇ ಸಮ್ಮೇಳನದಲ್ಲಿ ತಾಂತ್ರಿಕ ಮತ್ತು ನೈತಿಕ‌ ಸವಾಲುಗಳ ಚರ್ಚೆಯಾಗಲಿ

ಬೀದರ್ | ಲೋಕಬಂಧು ನ್ಯೂಸ್
ಕಾರ್ಯನಿರತ ಪತ್ರಕರ್ತರ 40ನೇ ಸಮ್ಮೇಳನದಲ್ಲಿ ತಾಂತ್ರಿಕ ಮತ್ತು ನೈತಿಕ‌ ಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಲಿ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಆಶಿಸಿದರು.‌
ಬೀದರ್ ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಮ್ಮೇಳನದ ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿದರು.


ಇಂದು ಅಭಿವೃದ್ಧಿ ಪತ್ರಿಕೋದ್ಯಮ ಪಕ್ಕಕ್ಕೆ ಸರಿದು ಹೇಳಿಕೆ ಆಧರಿತ ಪತ್ರಿಕೋದ್ಯಮವೇ ಪ್ರಧಾನವಾಗುತ್ತಿರುವುದು ಆರೋಗ್ಯಕರವಲ್ಲ. ಹಾಗಾಗಿ ಕಾರ್ಯನಿರತ ಪತ್ರಕರ್ತರ 40ನೇ ಸಮ್ಮೇಳನ ಮಾಧ್ಯಮ ಜಗತ್ತಿನ ಮಂಥನದ ವೇದಿಕೆಯಾಗಬೇಕು ಎಂದು ಕರೆ ನೀಡಿದರು.


ಕಾರ್ಯನಿರತ ಪತ್ರಕರ್ತರ ಸಮ್ಮೇಳನಗಳು ಒಂದು ಅರ್ಥದಲ್ಲಿ 'ಪಿಟ್ ಸ್ಟಾಪ್ಸ್' ಎಂದು ಹೇಳಬಹುದು. ರೇಸಿಂಗ್ ಕಾರುಗಳು ತಮ್ಮ ಓಟದ ನಡುವೆ ಟೈರ್'ಗಳನ್ನು ಬದಲಾಯಿಸಲು, ಇಂಧನ ತುಂಬಿಸಿಕೊಳ್ಳಲು ಮಾರ್ಗ ಮಧ್ಯದಲ್ಲಿರುವ ನಿಲ್ದಾಣಗಳನ್ನು ಪಿಟ್ ಸ್ಟಾಪ್ಸ್ ಎಂದು ಕರೆಯುತ್ತಾರೆ. ವೈರಲ್ ಸುದ್ದಿಗಳ ವೇಗದಲ್ಲಿರುವ ಪತ್ರಿಕೋದ್ಯಮಕ್ಕೆ ಪ್ರಸ್ತುತ ಇಂಥ ಪಿಟ್ ಸ್ಟಾಪ್ಸ್'ಗಳ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಸಮ್ಮೇಳನ ವೃತ್ತಿಪರರಿಗೆ ತಮ್ಮ ನೋಟಗಳನ್ನು, ಆಯ್ಕೆಗಳನ್ನು ಮತ್ತು ವೃತ್ತಿಪರತೆಯನ್ನು ತೀಕ್ಷ್ಣಗೊಳಿಸಲು ಹಾಗೂ ಅವರ ಆಂತರಿಕ ದಿಕ್ಸೂಚಿಯನ್ನು ಮರು ಚಿಂತನಗೆ ಒಳಪಡಿಸಿಕೊಳ್ಳಲು ವೇದಿಕೆ ಒದಗಿಸುತ್ತದೆ ಎಂಬ ಭರವಸೆ ಇದೆ ಎಂದರು.‌


ಕೃತಕ ಬುದ್ದಿಮತ್ತೆ ತಂತ್ರಜ್ಞಾನ-ಚಾಲಿತ ಯುಗದಲ್ಲಿ ನಮ್ಮ ಕೌಶಲ್ಯಗಳನ್ನು ನವೀಕರಣಗೊಳಿಸಿಕೊಳ್ಳುವ ಜೊತೆಗೆ‌ ಪತ್ರಿಕೋದ್ಯಮದ ಆದ್ಯತೆಗಳನ್ನೂ ಮರು ಪರಿಶೀಲನೆಗೆ ಚರ್ಚೆಗೆ ಒಳಪಡಿಸಬೇಕಿದೆ. ಇವತ್ತಿನ ತಾಂತ್ರಿಕ ವೇಗ ಮತ್ತು ಹೊಸ ಹೊಸ ತಂತ್ರಜ್ಞಾನದ ವೇಗದಲ್ಲಿ ಬಹುತೇಕ ಪ್ರತೀ ಐದು ವರ್ಷಗಳಿಗೆ ಒಮ್ಮೆ ನಾವು ಕಲ್ಪಿಸಿಕೊಳ್ಳಲಾಗದ ತಂತ್ರಜ್ಞಾನ‌ ಹೊರಗೆ ಬರುತ್ತಿವೆ.


ಹೊಸದಾಗಿ ಬಂದಿರುವ ಎಐ ತಂತ್ರಜ್ಞಾನದ ಸಾಧ್ಯತೆಗಳನ್ನು ಮತ್ತು ಅಪಾಯಗಳನ್ನು ನಾವು ಸರಿಯಾಗಿ ಗ್ರಹಿಸುವ ಮೊದಲೇ ಹೊಸ ತಂತ್ರಜ್ಞಾನ‌ ಬಂದಿರುತ್ತದೆ. ಈಗಾಗಲೇ‌ ಎಐ ಕೂಡಾ ಹಳತಾಗಿ ಸೂಪರ್ ಎಐ ಬರುತ್ತಿದೆ. ಅವೆಲ್ಲವನ್ನೂ ಅರಿಯುವ ಮತ್ತು ಅಪಾಯಗಳನ್ನು ತಡೆಯುವ ಕಾರ್ಯಾಗಾರವಾಗಿ ಈ ಬಾರಿಯ ಸಮ್ಮೇಳನ ರೂಪುಗೊಳ್ಳಲಿ ಎಂದು ಸಲಹೆ ನೀಡಿದರು.


ಡೀಪ್‌ ಫೇಕ್‌ಗಳನ್ನು ಹೇಗೆ ಗುರುತಿಸುವುದು ಮತ್ತು ಸಾಮಾಜಿಕ ಮಾಧ್ಯಮ ಲೀಡ್‌ಗಳನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು ನ್ಯೂಸ್ ರೂಮ್'ಗಳು  ಕಲಿಸಬೇಕಾಗಿದೆ. ಮಾಧ್ಯಮ ಲೋಕದ ಕಾರ್ಪೊರೇಟೀಕರಣದ ತಂದೊಡ್ಡಿರುವ ನೈತಿಕ ಸವಾಲುಗಳ ನಡುವೆಯೇ ಈಗ ಎಐ ಮತ್ತು ಆಧುನಿಕ ತಂತ್ರಜ್ಞಾನವೂ ಹೊಸ ಹೊಸ ನೈತಿಕ ಸವಾಲುಗಳನ್ನು ಮುಂದಿಟ್ಟಿದೆ. ಹಾಗಾಗಿ ನೈತಿಕ ಮತ್ತು ತಾಂತ್ರಿಕ ಸವಾಲುಗಳ ಬಗ್ಗೆ ಅರ್ಥಪೂರ್ಣ ಚರ್ಚೆಗೆ ಸಮ್ಮೇಳನ ವೇದಿಕೆಯಾಗಲಿ ಎಂದು ಪ್ರಭಾಕರ್ ಬಯಸಿದರು.


ಈ ಬಾರಿಯ ಬಜೆಟ್‌ನಲ್ಲೂ ಬಂಪರ್
ಪತ್ರಕರ್ತರ ಸಮುದಾಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯ ಬಜೆಟ್‌ನಲ್ಲೂ ಶ್ರಮಿಕ ಪತ್ರಕರ್ತ ಸಮುದಾಯಕ್ಕೆ ಉತ್ತಮ‌ ಅನುಕೂಲತೆ ಕಲ್ಪಿಸುವ ಭರವಸೆ ಇದೆ ಎಂದರು.


ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಈಶ್ವರ್ ಖಂಡ್ರೆ ಮತ್ತು ರಹೀಮ್ ಖಾನ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಮದನ್ ಗೌಡ, ಜಿಲ್ಲಾಧ್ಯಕ್ಷ ಆನಂದ್ ದೇವಪ್ಪ ಮೊದಲಾದವರಿದ್ದರು.