ಕಾರ್ಕಳ | ಲೋಕಬಂಧು ನ್ಯೂಸ್
ಪವರ್ ಶೇರಿಂಗ್ ಸಾರ್ವಜನಿಕ ಚರ್ಚೆಯ ವಿಷಯ ಆಗಬಾರದು. ಅನಿವಾರ್ಯತೆ, ಆವಶ್ಯಕತೆ ಇದ್ದರೆ ಹೈಕಮಾಂಡ್ ತೀರ್ಮಾನ ಮಾಡಬೇಕೇ ಹೊರತು ಸಾರ್ವಜನಿಕವಾಗಿ ಮಾತನಾಡುವುದು ಸರಿಯಲ್ಲ. ಅದರಿಂದ ಜನರಲ್ಲಿ ಅಭದ್ರತೆ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಪಕ್ಷ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗೆ ಒಳ್ಳೆಯ ಸರಕಾರ ಇರಬೇಕು. ಭ್ರಷ್ಟಾಚಾರ ರಹಿತ ಸದೃಢ ಸರಕಾರ ಬೇಕು. ಸರಕಾರ ಸುಭದ್ರವಾಗಿರಬೇಕು ಇದು. ಸಾರ್ವಜನಿಕರು ಮತ್ತು ಕಾರ್ಯಕರ್ತರ ಅಭಿಲಾಷೆ.
ಗ್ಯಾರಂಟಿ ಕಾರ್ಯಕ್ರಮಗಳಿಂದ ಬಡವರಿಗೆ ಅನುಕೂಲವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ಹಸಿವು ಮುಕ್ತ ಮಾಡಿದೆ. ಸುಭದ್ರ ಸರಕಾರ ನೀಡಲು ಪ್ರಯತ್ನ ಮಾಡಬೇಕು ಎಂದು ಮೊಯ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಗೊಂದಲ ವಿಚಾರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮೊಯ್ಲಿ, ಅವರಿಬ್ಬರಲ್ಲಿ ಏನೇ ಕೋಪವಿದ್ದರೂ ಕ್ಯಾಬಿನೆಟ್ ನಿರಾತಂಕವಾಗಿ ನಡೆಯುತ್ತಿದೆ, ಸರ್ಕಾರದ ಕಾರ್ಯಕ್ರಮಗಳು ಅಡಚಣೆ ಇಲ್ಲದೆ ಅನುಷ್ಠಾನ ಆಗುತ್ತಿವೆ. ನಮಗೆ ಬೇಕಾಗಿರುವುದು ಅಷ್ಟೇ.
ಅವರು ಪರಸ್ಪರ ಅಪ್ಪಿಕೊಳ್ಳಲಿ ಅಥವಾ ಮುನಿಸಿಕೊಳ್ಳಲಿ. ಜನರಿಗೆ ಬೇಕಾದದ್ದು ಉತ್ತಮ ಆಡಳಿತ ಮಾತ್ರ. ವಾರ ವಾರ ಕ್ಯಾಬಿನೆಟ್ ಮೀಟಿಂಗ್ ನಡೆಯುತ್ತಿದೆ. ಬಿಕ್ಕಟ್ಟು ಇದ್ದರೆ ವಾರ ವಾರ ಕ್ಯಾಬಿನೆಟ್ ಮೀಟಿಂಗ್ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದರು.
ಮಂತ್ರಿಗಳಾಗಬೇಕು ಎಂದು ಹಂಬಲಿಸುವವರು ಇರುತ್ತಾರೆ, ಮುಖ್ಯಮಂತ್ರಿ ಆಗಬೇಕು ಎಂದು ಹಂಬಲಿಸುವುದೂ ತಪ್ಪಲ್ಲ. ಆದರೆ, ಅದು ಸಾರ್ವಜನಿಕ ಚರ್ಚೆಯ ವಸ್ತು ಆಗಲೇಬಾರದು ಎಂದು ಮೊಯ್ಲಿ ಪುನರುಚ್ಚರಿಸಿದರು.
ಮಹಾದೇವಪ್ಪ ದಲಿತ ಸಿಎಂ ಚರ್ಚೆ ವಿಚಾರವಾಗಿ ಮಾತನಾಡಿದ ವೀರಪ್ಪ ಮೊಯ್ಲಿ, ಯಾವುದೇ ಕಾರಣಕ್ಕೂ ಈ ಚರ್ಚೆ ಸಾರ್ವಜನಿಕವಾಗಿ ಬರಬಾರದು. ಇದನ್ನು ನಾನೋರ್ವ ಪಕ್ಷದಲ್ಲಿ ಹಿರಿಯನಾಗಿ ಸಲಹೆ ನೀಡುತ್ತೇನೆ ಎಂದರು.
30 ಮಂದಿ ಶಾಸಕರು ಸಚಿವರಾಗುವ ಇಚ್ಛೆ ವ್ಯಕ್ತಪಡಿಸಿರುವ ವಿಚಾರದಲ್ಲಿ ಮಾತನಾಡಿ, ಕ್ಯಾಬಿನೆಟ್ ನಲ್ಲಿ ಕೆಲವರು ಮಾತ್ರ ಇರಲು ಸಾಧ್ಯ, ಒಬ್ಬರು ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯ. ಅನಗತ್ಯ ಚರ್ಚೆ ಸಲ್ಲದು ಎಂದು ಒತ್ತಿಹೇಳಿದರು.