ಕರಾವಳಿ ಜಿಲ್ಲೆಯ ಮೀನುಗಾರರು ಎದುರಿಸುತ್ತಿರುವ ಅಂತರರಾಜ್ಯ ಮೀನುಗಾರಿಕೆ ಸಮಸ್ಯೆಗಳ ಬಗ್ಗೆ ಮಹಾರಾಷ್ಟ್ರ ಮೀನುಗಾರಿಕೆ ಸಚಿವ ನಿತೇಶ್ ರಾಣೆ ಅವರನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ಕರ್ನಾಟಕ ಕರಾವಳಿ ಜಿಲ್ಲೆಗಳ ಮೀನುಗಾರರು ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಅಂತರರಾಜ್ಯ ಭಾಗದಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಸಮನ್ವಯತೆ ಹಾಗೂ ಮಾಹಿತಿಯ ಕೊರತೆಯಿಂದ ನಿಗದಿತ ವ್ಯಾಪ್ತಿ ಮೀರಿದಾಗ ಮಹಾರಾಷ್ಟ ಮೀನುಗಾರಿಕೆ ಇಲಾಖೆ ಕೇಸು ದಾಖಲಿಸಿ, ಅಪಾರ ಪ್ರಮಾಣದ ದಂಡ ಹಾಕುವ ಪ್ರಕರಣಗಳು ನಡೆಯುತ್ತಿದ್ದು, ಅದರಿಂದ ಕರಾವಳಿ ಕರ್ನಾಟಕದ ಮೀನುಗಾರರು ತೀವ್ರ ಸಮಸ್ಯೆ ಎದುರಿಸುವ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ, ಅಂಥ ಪ್ರಕರಣಗಳನ್ನು ಕೈಬಿಟ್ಟು ಮೀನುಗಾರರಿಗೆ ಸಹಾಯ ಮಾಡುವಂತೆ ಶಾಸಕ ಯಶಪಾಲ್ ಸುವರ್ಣ ಅವರು ಸಚಿವರಿಗೆ ಮನವಿ ಮಾಡಿದರು.
ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯ ರಾಜ್ಯಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳಲ್ಲಿ ಸಮನ್ವಯತೆ ಸಾಧಿಸಲು ರಾಷ್ಟ್ರೀಯ ಮೀನುಗಾರಿಕಾ ನೀತಿ ಜಾರಿಗೆ ತರಲು ಸಹಕಾರ ನೀಡುವ ಜೊತೆಗೆ ಎಲ್ಲಾ ರಾಜ್ಯಗಳ ಮೀನುಗಾರಿಕಾ ಸಚಿವರು ಹಾಗೂ ಮೀನುಗಾರರ ಮುಖಂಡರನ್ನೊಳಗೊಂಡ ಸಮನ್ವಯ ಸಮಿತಿ ರಚಿಸುವ ನಿಟ್ಟಿನಲ್ಲಿ ಕೈಜೋಡಿಸುವಂತೆ ಮನವಿ ಮಾಡಿ, ಈಗಾಗಲೇ ಗೋವಾ ಸರ್ಕಾರದ ಮೀನುಗಾರಿಕೆ ಸಚಿವರೊಂದಿಗೆ ಚರ್ಚೆ ನಡೆಸಿರುವುದಾಗಿ ಮಾಹಿತಿ ನೀಡಿದರು.
ಏಷ್ಯಾದಲ್ಲೇ ಅತೀ ದೊಡ್ಡ ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸಾವಿರಾರು ಬೋಟ್'ಗಳು ದೇಶದಲ್ಲಿಯೇ ಅತ್ಯಂತ ವೈಜ್ಞಾನಿಕವಾಗಿ ಅಧುನಿಕ ತಂತ್ರಜ್ಞಾನದ ಮೂಲಕ ಮೀನುಗಾರಿಕೆ ನಡೆಸುತ್ತಿದ್ದು, ಮಹಾರಾಷ್ಟ್ರದ ಮೀನುಗಾರಿಕೆ ಇಲಾಖೆಯ ಉನ್ನತ ಅಧಿಕಾರಿಗಳ ನಿಯೋಗದೊಂದಿಗೆ ಮಲ್ಪೆಗೆ ಭೇಟಿ ನೀಡುವಂತೆ ಸಚಿವ ನಿತೇಶ್ ರಾಣೆ ಅವರಿಗೆ ಯಶಪಾಲ್ ಸುವರ್ಣ ಆಹ್ವಾನಿಸಿದರು.
ಯಶಪಾಲ್ ಸುವರ್ಣ ಅವರ ಮನವಿಗೆ ಸ್ಪಂದಿಸಿದ ಸಚಿವ ನಿತೇಶ್ ರಾಣೆ, ಅಂತರರಾಜ್ಯ ಮೀನುಗಾರಿಕೆ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ ವಹಿಸುವ ಭರವಸೆ ನೀಡಿ ರಾಷ್ಟ್ರೀಯ ಮೀನುಗಾರಿಕಾ ನೀತಿ ಬಗ್ಗೆ ಸಹಮತ ಸೂಚಿಸಿದರು. ಅಂತರರಾಜ್ಯ ಮೀನುಗಾರಿಕಾ ಸಮನ್ವಯ ಸಮಿತಿ ರಚನೆಗೆ ವಿಶೇಷ ಮುತುವರ್ಜಿ ವಹಿಸುವ ಭರವಸೆ ನೀಡಿ, ಮಲ್ಪೆ ಬಂದರಿಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಂಬೈ ಮಹಾನಗರಪಾಲಿಕೆ ಮಾಜಿ ಕಾರ್ಪೊರೇಟರ್ ಅರವಿಂದ ಶೆಟ್ಟಿ, ಉದ್ಯಮಿಗಳಾದ ರಾಜೇಶ್ ಕುಂದರ್, ಕಿಶನ್ ಶೆಟ್ಟಿ, ಅಮಿತ್ ಪೂಜಾರಿ ಮೊದಲಾದವರಿದ್ದರು.