ಶ್ರೀನಿವಾಸ ವಿ.ವಿ. ಕುಲಾಧಿಪತಿ ರಾಘವೇಂದ್ರ ರಾವ್ ನಿಧನ

ಮಂಗಳೂರು | ಲೋಕಬಂಧು ನ್ಯೂಸ್
ಪ್ರತಿಷ್ಠಿತ ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌‌ ಸ್ಥಾಪಕ ಅಧ್ಯಕ್ಷ ಹಾಗೂ ಶ್ರೀನಿವಾಸ ವಿಶ್ವವಿದ್ಯಾನಿಲಯದ‌ ಕುಲಾಧಿಪತಿ ಖ್ಯಾತ ಲೆಕ್ಕಪರಿಶೋಧಕ ಡಾ. ಸಿಎ ಎ.ರಾಘವೇಂದ್ರ ರಾವ್ (89) ಫೆ.17ರಂದು ಮಂಗಳವಾರ ರಾತ್ರಿ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮಂಗಳೂರಿನ ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.


ಡಾ.ರಾಘವೇಂದ್ರ ರಾವ್ ಪತ್ನಿ ವಿಜಯಲಕ್ಷ್ಮಿ ರಾವ್, ಪುತ್ರ ಸಿಎ ಶ್ರೀನಿವಾಸ ರಾವ್ (ಶ್ರೀನಿವಾಸ ವಿ.ವಿ. ಸಹ ಕುಲಾಧಿಪತಿ), ಪುತ್ರಿ ಪದ್ಮಿನಿ ರಾವ್ ಅವರನ್ನು ಅಗಲಿದ್ದಾರೆ.


ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ
1988ರಲ್ಲಿ ಎ.ಶ್ಯಾಮರಾವ್ ಫೌಂಡೇಶನ್ ಸ್ಥಾಪಿಸಿದ ಅವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮುನ್ನುಡಿ ಬರೆದವರು. ಆರಂಭದಲ್ಲಿ ಕೇವಲ ಏಳು ಮಂದಿ ವಿದ್ಯಾರ್ಥಿಗಳೊಂದಿಗೆ ಸ್ಥಾಪನೆಯಾದ ಶ್ರೀನಿವಾಸ್ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ನಂತರ ಹಲವು ವೃತ್ತಿಪರ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಾಗಿ ವಿಸ್ತಾರಗೊಂಡಿತು. ಇಂದು ಶ್ರೀನಿವಾಸ ಸಂಸ್ಥೆಗಳು ರಾಜ್ಯದ ಪ್ರಮುಖ ಶಿಕ್ಷಣ ಕೇಂದ್ರಗಳಾಗಿ ಗುರುತಿಸಿಕೊಂಡಿವೆ.


ಉದ್ಯಮ ಮತ್ತು ಸಮಾಜಸೇವೆ
1980ರಲ್ಲಿ ‘ಶ್ರೀನಿವಾಸ್’ ಎಂಬ ತ್ರಿ-ಸ್ಟಾರ್ ಸಸ್ಯಾಹಾರಿ ಹೋಟೆಲ್ ಸ್ಥಾಪಿಸುವ ಮೂಲಕ ಉದ್ಯಮ ಕ್ಷೇತ್ರದಲ್ಲಿಯೂ ಛಾಪು ಮೂಡಿಸಿದ್ದರು. ಶಿಕ್ಷಣ, ಸಮಾಜಸೇವೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ನೀಡಿದ ಮಹತ್ವದ ಸೇವೆಗಾಗಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಸನ್ಮಾನ (2004), ಕೃಷ್ಣಮಠದ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ.


ಅಂತಿಮ ದರ್ಶನ
ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಬುಧವಾರ ಬೆಳಿಗ್ಗೆ 11 ಗಂಟೆಗೆ ಮುಕ್ಕ ಶ್ರೀನಿವಾಸ ಕಾಲೇಜು ಕ್ಯಾಂಪಸ್‌ನಲ್ಲಿ ಇರಿಸಲಾಗಿದ್ದು, ಮಧ್ಯಾಹ್ನದ ಬಳಿಕ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು.


ಶಿಷ್ಯವೃಂದದ ಶ್ರದ್ಧಾಂಜಲಿ
ಡಾ. ರಾಘವೇಂದ್ರ ರಾವ್ ಶಿಸ್ತು, ಮೌಲ್ಯಾಧಾರಿತ ಶಿಕ್ಷಣ ಮತ್ತು ಸೇವಾಭಾವನೆಗೆ ಹೆಸರಾಗಿದ್ದರು. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಅವರ ಪಾತ್ರ ಅಮೂಲ್ಯವಾಗಿದೆ. ಅವರ ನಿಧನಕ್ಕೆ ಶಿಕ್ಷಣ ವಲಯದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಮಾಜದ ವಿವಿಧ ವರ್ಗದವರು ಸಂತಾಪ ಸೂಚಿಸಿದ್ದಾರೆ.


ಸಂತಾಪ
ರಾಘವೇಂದ್ರ ರಾವ್ ನಿಧನಕ್ಕೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ. ಅಂಬಲಪಾಡಿ ಈಶಾವಾಸ್ಯ ಪ್ರತಿಷ್ಠಾನ ಸಂತಾಪ ಸೂಚಿಸಿದೆ