ಲೋಕಬಂಧು ನ್ಯೂಸ್, ಉಡುಪಿ
ಸರಕಾರ ಮೀನುಗಾರರ ಅಭಿವೃದ್ಧಿಗೆ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಜಿಲ್ಲೆಯಲ್ಲಿ ಹೆಚ್ಚು ಫಲಾನುಭವಿಗಳು ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಮಲ್ಪೆ ಸರ್ವಋತು ಬಂದರಾಗಿದ್ದು ಜಿಲ್ಲೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಮೀನುಗಾರರು ಮೀನುಗಾರಿಕೆ ಹಾಗೂ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಸರಕಾರದಿಂದ ವಿವಿಧ ಯೋಜನೆಯಡಿ ನೀಡಲಾಗುವ ಆರ್ಥಿಕ ಸೌಲಭ್ಯ, ಸಹಾಯಧನ ಕುರಿತ ಮಾಹಿತಿ ತಲುಪಿಸುವುದರೊಂದಿಗೆ ಯೋಜನೆಯ ಫಲಾನುಭವಿಗಳನ್ನಾಗಿಸಿ ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡಬೇಕು.
ಪ್ರಸ್ತುತ ನಿಗದಿಪಡಿಸಿರುವ ಸೌಲಭ್ಯಗಳು ಹೆಚ್ಚಿನ ಜನರಿಗೆ ತಲುಪಿಸಲು ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಸರಕಾರಕ್ಕೆ ಹೆಚ್ಚುವರಿ ಅನುದಾನ ಹಾಗೂ ಗುರಿ ನೀಡಲು ಪ್ರಸ್ತಾವನೆ ಸಲ್ಲಿಸಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ 5,598 ಮೋಟಾರಿಕೃತ ನಾಡದೋಣಿಗಳು, 2,017 ಯಾಂತ್ರೀಕೃತ ಮೀನುಗಾರಿಕೆ ದೋಣಿಗಳು ಹಾಗೂ 447 ಸಾಂಪ್ರದಾಯಿಕ ನಾಡದೋಣಿಗಳು ಕಾರ್ಯಾಚರಿಸುತ್ತಿವೆ. ಕಳೆದ ಸಾಲಿನಲ್ಲಿ ಪಿ.ಎಂ.ಎಂ.ಎಸ್.ವೈ ಯೋಜನೆಯಡಿ ಪಚ್ಚಿಲೆ ಕೃಷಿ ಮಸೆಲ್ಸ್, ಕಲ್ಲ, ಕ್ಲಾಮ್ಸ್, ಮುತ್ತು ಇತ್ಯಾದಿ ಕಾರ್ಯಕ್ರಮಗಳ ಪ್ರತಿಶತ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳ ಸ್ಥಾಪನೆಗೆ ಜಿಲ್ಲೆಯ 6 ಫಲಾನುಭವಿಗಳಿಗೆ ಸುಮಾರು 2 ಕೋ. ರೂ. ಸಹಾಯಧನ ಸೌಲಭ್ಯ ಒದಗಿಸಲಾಗಿದೆ. ಕಳೆದ ಸಾಲಿನಲ್ಲಿ ಸಾಂಪ್ರದಾಯಿಕ ಮೀನುಗಾರರಿಗೆ ಆಳಸಮುದ್ರ ಮೀನುಗಾರಿಕೆ ಯಾಂತ್ರೀಕೃತ ದೋಣಿ ನಿಮರ್ಿಸಲು ಸಹಾಯ ಯೋಜನೆಯಡಿ ಜಿಲ್ಲೆಗೆ ಸಾಮಾನ್ಯ ವರ್ಗದಡಿ 8 ಗುರಿ ನಿಗದಿಪಡಿಸಿದ್ದು, 9 ಅರ್ಜಿಗಳು ಸಲ್ಲಿಕೆಯಾಗಿವೆ. ಲಾಟರಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ಬಿ.ವಿ, ಲೀಡ್ ಬ್ಯಾಂಕ್ ಮ್ಯಾನೆಲೇಜರ್ ಹರೀಶ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್, ಆಯ್ಕೆ ಸಮಿತಿ ಸದಸ್ಯರು ಮೊದಲಾದವರಿದ್ದರು.