ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್'ನಿಂದ ಕಡಲ ಭದ್ರತೆ ಜಾಗೃತಿ

ಬ್ರಹ್ಮಾವರ | ಲೋಕಬಂಧು ನ್ಯೂಸ್
ಸುರಕ್ಷಿತ ತಟ, ಸಮೃದ್ಧ ಭಾರತ ಆಶಯದೊಂದಿಗೆ ಸಿಐಎಸ್ಎಫ್-ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್'ನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಆಯೋಜಿಸಿದ್ದು, ಇದು ಬೃಹತ್ ರಾಷ್ಟ್ರೀಯ ಜಾಗೃತಿ ಅಭಿಯಾನವಾಗಿದೆ. ಅಭಿಯಾನ ಜ.28ರಂದು ಪ್ರಾರಂಭವಾಗಿ ಫೆ.22ರ ವರೆಗೆ ನಡೆಯಲಿದ್ದು 6,553 ಕಿ.ಮೀ.ಗೂ ಹೆಚ್ಚು ದೂರದ ಈ ಸೈಕಲ್ ಯಾತ್ರೆ ಕರಾವಳಿ ತೀರದ ಭದ್ರತೆ, ದೇಶಭಕ್ತಿ ಮತ್ತು ವಂದೇ ಮಾತರಂ' ಗೀತೆಯ 150ನೇ ವರ್ಷವನ್ನಾಚರಿಸಲು ಗುಜರಾತ್‌ನ ಲಖಪತ್'ನಿಂದ ಪಶ್ಚಿಮ ಬಂಗಾಳದ ಬಕ್ಖಾಲಿ ವರೆಗೆ ಸಾಗಲಿದೆ. ಈ ಸೈಕ್ಲೊಥಾನ್ ಕಡಲ ತೀರದ ಭದ್ರತೆ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಸಿಐಎಸ್ಎಫ್ ಉಪ ಕಮಾಂಡೆಂಟ್ ಸಂದೀಪ್ ಚಕ್ರವರ್ತಿ ಹೇಳಿದರು.
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಬ್ರಹ್ಮಾವರದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


25 ದಿನಗಳ ಸೈಕ್ಲೋಥಾನ್'ನಲ್ಲಿ ಒಟ್ಟು 130 ಸೈಕ್ಲಿಸ್ಟ್'ಗಳು ಭಾಗವಹಿಸಿದ್ದು ಅದರಲ್ಲಿ 65 ಮಂದಿ ಮಹಿಳೆಯರು ಭಾಗವಹಿಸಿ ಕರಾವಳಿ ತೀರದ ರಕ್ಷಣೆ ಜೊತೆಗೆ ಮಹಿಳಾ ಸಶಕ್ತೀಕರಣದ ಸಂದೇಶ ಸಾರುತ್ತಿದ್ದಾರೆ. ಮುಖ್ಯವಾಗಿ ದೇಶದ ಕರಾವಳಿ ತೀರದ ಜನರ ಜೊತೆ ಬೆರೆತು ಅವರ ಆಚಾರ ವಿಚಾರಗಳನ್ನು ಅರಿತು ಅವರಿಗೆ ಕಡಲ ಭದ್ರತೆಯ ಬಗ್ಗೆ ಮಾಹಿತಿ ನೀಡಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.


ಕರ್ನಾಟಕದಲ್ಲಿ ಇದುವರೆಗೆ ಭೇಟಿ ನೀಡಿದ ಕಡೆಗಳಲ್ಲಿ ಜನರಿಂದ ಅತ್ಯುತ್ತಮ ಸ್ಪಂದನೆ ದೊರೆತಿದ್ದು ಜಾಗೃತಿ ಕಾರ್ಯ ಯಶಸ್ಸು ಕಾಣುತ್ತಿದೆ. ಕಾರ್ಯಕ್ರಮ ಕೇರಳದ ಕೊಚ್ಚಿಯಲ್ಲಿ ಸಂಪನ್ನವಾಗಲಿದೆ ಎಂದರು.


ರ್ಯಾಲಿ ಬೆಳಗ್ಗೆ ತ್ರಾಸಿ ಪ್ರವೇಶಿಸಿದ್ದು, ಸ್ಥಳೀಯ ಸಂಪ್ರದಾಯದೊಂದಿಗೆ ಸ್ವಾಗತಿಸಲಾಯಿತು. ಅಲ್ಲಿನ ವಿದ್ಯಾರ್ಥಿ ಹಾಗೂ ಸಮುದಾಯದ ಜನರೊಂದಿಗೆ ಸಂವಾದ ನಡೆಸಿ, ಕುಂದಾಪುರ ಮೂಲಕ ಬ್ರಹ್ಮಾವರ ತಲುಪಿತು. ಆ ಬಳಿಕ ಉಡುಪಿ ಮಾರ್ಗವಾಗಿ ಕಾಪು ಸರಕಾರಿ ಕಾಲೇಜಿನಲ್ಲಿ ಸಂವಾದ ನಡೆಸಿ ಹೆಜಮಾಡಿ ಮೂಲಕ ಮಂಗಳೂರಿಗೆ ತಲುಪಿತು.


ಕಾರ್ಯಕ್ರಮದಲ್ಲಿ ಸಿಐಎಸ್ಎಫ್ ಸಹಾಯಕ ಕಮಾಂಡೆಂಟ್ ದುರ್ಗೇಶ್ ಕಲಾಲ್, ಸಿಎಂಓ ಭುವನೇಶ್ ಜಾದವ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿಜು ನಾಯ್ಕ್, ಉಪಾಧ್ಯಕ್ಷ ಸುದೇಶ್ ಹೆಗ್ಡೆ, ಕಾರ್ಯದರ್ಶಿ ಗ್ರೆಗೋರಿ ಡಿ'ಸೋಜ, ಉದ್ಯಮಿ ರಾಜಾರಾಮ್ ಶೆಟ್ಟಿ ಉಪಸ್ಥಿತರಿದ್ದರು.


ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.