ಕ್ರೈಸ್ತರಿಂದ ಶ್ರದ್ಧಾಭಕ್ತಿಯ ಪಾಮ್ ಸಂಡೇ ಆಚರಣೆ

ಲೋಕಬಂಧು ನ್ಯೂಸ್ | ಉಡುಪಿ, ಮಾ.30
ಭಗವಾನ್ ಏಸು ಕ್ರಿಸ್ತ ಜೆರುಸಲೇಮ್ ನಗರ ಪ್ರವೇಶಿಸಿದ ಸಂಕೇತವಾಗಿ ‘ಗರಿಗಳ ಭಾನುವಾರ ಹಬ್ಬ’ ಎಂದೇ ಪ್ರಸಿದ್ಧಿ ಪಡೆದಿರುವ ‘ಪಾಮ್ ಸಂಡೇ’ಯನ್ನು ಜಿಲ್ಲಾದ್ಯಂತ ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಕಲ್ಯಾಣಪುರ ಮಿಲಾಗ್ರಿಸ್ ಪ್ರಧಾನ ಚರ್ಚ್‌ನಲ್ಲಿ ನಡೆದ ಪಾಮ್ ಸಂಡೇ ಧಾರ್ಮಿಕ ವಿಧಿ-ವಿಧಾನದಲ್ಲಿ ಭಾಗವಹಿಸಿ ಸಂದೇಶ ನೀಡಿದರು. ಚರ್ಚಿನ ಪ್ರಧಾನ ಧರ್ಮಗುರು ವಂ‌. ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ.ಪ್ರದೀಪ್ ಕಾರ್ಡೊಜ ಉಪಸ್ಥಿತರಿದ್ದರು.


ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಕ್ರೈಸ್ತರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದು ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಏಸುವಿನ ಸ್ಮರಣೆ ಮಾಡಿದರು. ಚರ್ಚುಗಳಲ್ಲಿ ಏಸುವಿನ ಕಷ್ಟದ ದಿನಗಳನ್ನು ಸ್ಮರಿಸಿ, ಬಲಿಪೂಜೆ ನೆರವೇರಿಸಲಾಯಿತು.


ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಪಾಮ್ ಸಂಡೇ ಪ್ರಯುಕ್ತ ವಿಶೇಷ ಪೂಜೆ ನಡೆಸಲಾಯಿತು. ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ವಂ.ಚಾರ್ಲ್ಸ್ ಮಿನೇಜಸ್, ಶಿರ್ವ ಆರೋಗ್ಯ ಮಾತಾ ಚರ್ಚಿನಲ್ಲಿ ಪ್ರಧಾನ ಧರ್ಮಗುರು ಹಾಗೂ ಉಡುಪಿ ಧರ್ಮಪ್ರಾಂತ್ಯದ ನಿಯೋಜಿತ ಧರ್ಮಾಧ್ಯಕ್ಷ ಶ್ರೇಷ್ಠಗುರು ವಂ.ಡಾ.ಲೆಸ್ಲಿ ಸಿ/ ಡಿ'ಸೋಜಾ, ತೊಟ್ಟಂ ಸಂತ ಅನ್ನಮ್ಮ ಚರ್ಚ್‌ನ ಲ್ಲಿ ವಂ‌ ಡೆನಿಸ್ ಡೆಸಾ, ಸಾಸ್ತಾನ ಚರ್ಚಿನಲ್ಲಿ ವಂ.ಸುನಿಲ್ ಡಿ'ಸಿಲ್ವ ಉಪಸ್ಥಿತಿಯಲ್ಲಿ ಪಾಮ್ ಸಂಡೇ ಧಾರ್ಮಿಕ ವಿಧಿಗಳು ಜರುಗಿದವು.


ಪಾಮ್ ಸಂಡೇ ಆಚರಣೆಯೊಂದಿಗೆ ‘ಕ್ರೈಸ್ತರ ಪವಿತ್ರ ಸಪ್ತಾಹ’ ಆರಂಭಗೊಳ್ಳುತ್ತದೆ. ಪವಿತ್ರ ಸಪ್ತಾಹ ಕ್ರೈಸ್ತರಿಗೆ ಮಹತ್ವದಾಗಿದ್ದು, ಈ ಸಪ್ತಾಹದ ಗುರುವಾರ ತನ್ನ ಶಿಷ್ಯರೊಂದಿಗೆ ಏಸುವಿನ ಕೊನೆಯ ಭೋಜನ ಹಾಗೂ ಶಿಷ್ಯರ ಪಾದ ತೊಳೆದ ದಿನವನ್ನು ಸ್ಮರಿಸಿದರೆ, ಶುಕ್ರವಾರ ಏಸುಕ್ರಿಸ್ತರ ಮರಣದ ದಿನವಾದ ‘ಗುಡ್ ಫ್ರೈಡೆ’ ಆಚರಿಸಲಾಗುತ್ತದೆ. ಅಂದು ಇಡೀ ದಿನ ಉಪವಾಸ ಮತ್ತು ಧ್ಯಾನದಲ್ಲಿ ಕ್ರೈಸ್ತರು ದಿನ ಕಳೆಯುತ್ತಾರೆ.


ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಏಸುಕ್ರಿಸ್ತರ ಪುನರುತ್ಥಾನ ಪ್ರಯುಕ್ತ ‘ಈಸ್ಟರ್ ಹಬ್ಬ’ ಆಚರಿಸಲಾಗುತ್ತದೆ.