ಲೋಕಬಂಧು ನ್ಯೂಸ್ | ಉಡುಪಿ, ಜೂ.27
ಸಹಕಾರಿ ರಂಗದ ಪ್ರತಿಷ್ಠಿತ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಶನಿವಾರ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 20 ಲಕ್ಷ ರೂ. ಮೊತ್ತದ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸಸಿ ವಿತರಣೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಶಿಕ್ಷಣ ಕ್ಷೇತ್ರಕ್ಕೆ ಬಡಗಬೆಟ್ಟು ಸೊಸೈಟಿ ಕೊಡುಗೆ ಶ್ಲಾಘನೀಯ. ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರ ಸಾಮಾಜಿಕ ಕಳಕಳಿ ಈ ಕಾರ್ಯಕ್ರಮದ ಹಿಂದೆ ಅಡಗಿದೆ. ಈ ಕೊಡುಗೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.
ಮುಖ್ಯ ಅಭ್ಯಾಗತರಾಗಿದ್ದ ಶಾಸಕ ಯಶಪಾಲ್ ಸುವರ್ಣ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಾರ್ವಜನಿಕರ ಪ್ರೋತ್ಸಾಹ ಲಭಿಸುತ್ತಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕವಾಗಿ ಈ ಎರಡೂ ಜಿಲ್ಲೆಗಳು ಮುಂದಿವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸರಕಾರದ ಜೊತೆಗೆ ಶಾಲಾಭಿವೃದ್ಧಿ ಸಮಿತಿ, ಹಳೆವಿದ್ಯಾರ್ಥಿಗಳು ಮತ್ತು ಶಿಕ್ಷಣಾಭಿಮಾನಿಗಳ ಪ್ರೋತ್ಸಾಹವೂ ಲಭಿಸುತ್ತಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಬಡಗಬೆಟ್ಟು ಸೊಸೈಟಿ ಕನ್ನಡ ಶಾಲೆಗಳನ್ನು ಉಳಿಸುವ ಕಾರ್ಯದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.
ಉಡುಪಿ ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ. ಅತಿಥಿಗಳಾಗಿದ್ದರು.
ಸಂಪನ್ಮೂಲವ್ಯಕ್ತಿ ದಾಮೋದರ ಶರ್ಮ ಬಾರ್ಕೂರು ವಿಶೇಷ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ `ಸಹಕಾರ ರತ್ನ' ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಸುಮಾರು 50 ಕನ್ನಡ ಮಾಧ್ಯಮ ಶಾಲೆಗಳಿಗೆ 20 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗುತ್ತಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದರು.
ಸಂಘದ ನಿರ್ದೇಶಕರಾದ ಪುರುಷೋತ್ತಮ ಶೆಟ್ಟಿ, ಮನೋಹರ ಶೆಟ್ಟಿ, ವಿನಯಕುಮಾರ್, ಸದಾಶಿವ ನಾಯಕ್, ಎಲ್.ಉಮಾನಾಥ್, ಪದ್ಮನಾಭ ನಾಯಕ್, ಜಯಾ ಶೆಟ್ಟಿ ಮತ್ತು ಗಾಯತ್ರಿ ಭಟ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಹಾಗೂ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಇದ್ದರು.
ಶಾಖಾ ಪ್ರಬಂಧಕರಾದ ಸಮರ್ಥ ಶೆಟ್ಟಿ ಮತ್ತು ನವೀನ ಕುಮಾರ್ ನಿರೂಪಿಸಿದರು.