ಎರಡು ತಿಂಗಳ ಶಿಶುವಿಗೆ ಯಶಸ್ವಿ ಮೆನಿಂಗೋಸೀಲ್ ಶಸ್ತ್ರಚಿಕಿತ್ಸೆ

ಲೋಕಬಂಧು ನ್ಯೂಸ್ | ಉಡುಪಿ, ಜೂ.27
ಜನ್ಮಜಾತವಾಗಿ ಮೆನಿಂಗೋಸೀಲ್ ಎಂಬ ಅಪರೂಪದ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ತಿಂಗಳ ಶಿಶುವಿಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಖ್ಯಾತ ಮಕ್ಕಳ ನರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ರಾಜೇಶ್ ನಾಯರ್ ಮತ್ತವರ ತಂಡ ಅನುಭವಿ ಅನಸ್ತೇಷಿಯಾ ತಜ್ಞರ ಸಹಕಾರದೊಂದಿಗೆ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಮೆನಿಂಗೋಸೀಲ್, ಬೆನ್ನುಮೂಳೆಯ ಬೆಳವಣಿಗೆಯಲ್ಲಿ ಉಂಟಾಗುವ ದೋಷದಿಂದ ಶಿಶುವಿನ ಬೆನ್ನಿನ ಭಾಗದಲ್ಲಿ ಚೀಲದಂಥ ಉಬ್ಬು ರೂಪುಗೊಳ್ಳುವ ಸ್ಥಿತಿ. ಆ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಗೆ ಮುನ್ನ ಮಗು ಬೆನ್ನಿನ ಮೇಲೆ ಸರಿಯಾಗಿ ಮಲಗಲು ಸಾಧ್ಯವಾಗುತ್ತಿರಲಿಲ್ಲ. ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರು ಈ ಉಬ್ಬನ್ನು ಸುರಕ್ಷಿತವಾಗಿ ತೆಗೆದುಹಾಕಿ, ಬೆನ್ನುಹುರಿಗೆ ಸಂಬಂಧಿಸಿದ ಮೂಲ ಸಮಸ್ಯೆ ಸರಿಪಡಿಸಿದರು.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಮಗು ಉತ್ತಮವಾಗಿ ಚೇತರಿಸಿಕೊಂಡಿದೆ.


ಶಸ್ತ್ರಚಿಕಿತ್ಸೆ ನಂತರ ಮಗುವಿನ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಮಗು ಇದೀಗ ಬೆನ್ನಿನ ಮೇಲೆ ಸುಲಭವಾಗಿ ಮಲಗಲು ಸಾಧ್ಯವಾಗಿದೆ. ಮಗುವನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಿ, ಕೇವಲ ಮೂರು ದಿನಗಳಲ್ಲೇ ಆರೋಗ್ಯವಂತವಾಗಿ ಮನೆಗೆ ಕಳುಹಿಸಲಾಯಿತು.


ಮಗುವಿನ ತಾಯಿ ಹಾಗೂ ಕುಟುಂಬ ಸದಸ್ಯರು ಶಸ್ತ್ರಚಿಕಿತ್ಸೆಯ ಫಲಿತಾಂಶದಿಂದ ಸಂತೋಷಗೊಂಡಿದ್ದು, ಡಾ.ರಾಜೇಶ್ ನಾಯರ್ ಮತ್ತವರ ತಂಡ ಹಾಗೂ ಮಕ್ಕಳ ತಜ್ಞ ಡಾ.ಗುರುಪ್ರಸಾದ್ ಶೆಟ್ಟಿ ಮತ್ತು ಆದರ್ಶ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


ಈ ಶಸ್ತ್ರಚಿಕಿತ್ಸೆ ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ನೆರವೇರಿರುವುದು ಆಸ್ಪತ್ರೆಯ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿದೆ.