ಲೋಕಬಂಧು ನ್ಯೂಸ್ | ಉಡುಪಿ, ಜೂ.22
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ವಿ.ಸುನಿಲ್ ಕುಮಾರ್ ಪ್ರಯತ್ನದ ಫಲವಾಗಿ 2022ರಲ್ಲಿ ಕಾರ್ಕಳದಲ್ಲಿ ಆರಂಭಗೊಂಡ ಯಕ್ಷ ರಂಗಾಯಣವನ್ನು 2026ರ ಏ.19ರಂದು ಕರಾವಳಿ ರಂಗಾಯಣ ಎಂದು ಮರುನಾಮಕರಣ ಮಾಡಲಾಗಿದ್ದು, ಜೂ.14ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ಕರಾವಳಿ ರಂಗಾಯಣ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ ತಿಳಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಅವರು, 2023ರ ಮೇ 23ರಿಂದ ಇದುವರೆಗಿನ ತನ್ನ ಅಧಿಕಾರಾವಧಿಯಲ್ಲಿ ಆಧುನಿಕ ಪರಿಕಲ್ಪನೆಯಲ್ಲಿ ಯಕ್ಷಗಾನ ಕಟ್ಟುವ, ಕತೆ ಕಾವ್ಯ ಬಳಸಿ ರಂಗಭೂಮಿ ಕಟ್ಟುವ ಜೊತೆಗೆ ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪಸರಿಸುವಲ್ಲಿ ಶ್ರಮಿಸಿದ್ದಾಗಿ ತಿಳಿಸಿದರು.
ಸುಮಾರು 75 ರಂಗ ಶಿಬಿರಗಳು, ಕಮ್ಮಟಗಳು, ರೆಪರ್ಟರಿಗಳು ಇತ್ಯಾದಿಗಳನ್ನು ಲಭ್ಯ ಅನುದಾನದಲ್ಲಿ ಸಮರ್ಪಕವಾಗಿ ನಡೆಸಲಾಗಿದೆ. ವಿವಿಧ ಕಡೆಗಳಲ್ಲಿ 70ಕ್ಕೂ ಅಧಿಕ ನಾಟಕಗಳನ್ನು ಪ್ರದರ್ಶಿಸಲಾಗಿದೆ ಎಂದವರು ಮಾಹಿತಿ ನೀಡಿದರು. ಪ್ರಸಕ್ತ ವರ್ಷದಲ್ಲೂ 12 ಮಂದಿಯನ್ನೊಳಗೊಂಡ ರೆಪರ್ಟರಿ ಸಿದ್ಧಪಡಿಸಲು ಉದ್ದೇಶಿಸಲಾಗಿದೆ ಎಂದರು.
ಕಾರಂತರ ಬಗ್ಗೆ ಬಹುವಿಧ ಕಾರ್ಯ
ಡಾ. ಶಿವರಾಮ ಕಾರಂತ ಟ್ರಸ್ಟ್ ಕೂಡಾ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ `ಅರಿವಿನ ಬೆಳಕು' ಹೆಸರಿನಲ್ಲಿ ಡಾ.ಶಿವರಾಮ ಕಾರಂತರನ್ನು ಪರಿಚಯಿಸುವ ಕಾರ್ಯವನ್ನು ವಿವಿಧ ಆಯಾಮಗಳಲ್ಲಿ ನಡೆಸಲಾಗಿದೆ. ಪ್ರತಿವರ್ಷ ಕಾರಂತರ ಹೆಸರಿನಲ್ಲಿ 10 ಸಾವಿರ ನಗದು ಸಹಿತ ಕಾರಂತ ಪ್ರಶಸ್ತಿ ನೀಡಲಾಗುತ್ತಿದೆ. ಕಾರಂತ ಟ್ರಸ್ಟ್‌ನ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ರಾಜ್ಯ ಮಟ್ಟಕ್ಕೆ ವಿಸ್ತರಿಸಿ, ಡಾ. ಕಾರಂತರನ್ನು ರಾಜ್ಯವ್ಯಾಪಿ ಇನ್ನಷ್ಟು ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಎಕ್ಕಾರು ಗಣನಾಥ ಶೆಟ್ಟಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇದ್ದರು.
