ಲೋಕಬಂಧು ನ್ಯೂಸ್ | ಉಡುಪಿ, ಜೂ.25
ಅನೇಕರಿಗೆ ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿ ಬಹುಕೋಟಿ ವಂಚಿಸಿದ್ದ ಪ್ರಕರಣದಲ್ಲಿ ಗ್ರಾಹಕ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದೇ ಇದ್ದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಯನ್ನು ಪೊಲೀಸರು ಗುರುವಾರ ಬಂಧಿಸಿದ್ದು, ನ್ಯಾಯಾಲಯ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ, 1 ಲಕ್ಷ ರೂ. ದಂಡ ಹಾಗೂ ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಸಂತೋಷ್ ಪೈ ಎಂಬವರು ಅಮೃತ್ ಶೆಣೈ ವಿರುದ್ಧ ಉಡುಪಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗದ ಮುಂದೆ ದಾವೆ ಹೂಡಿದ್ದರು. ಪ್ರಕರಣ ವಿಚಾರಣೆಗೊಳಪಟ್ಟಿದ್ದು, ವೈಗರ್ ಅಪಾರ್ಟ್‌ಮೆಂಟ್'ನಲ್ಲಿರುವ ಮನೆ ನಂ.304ನ್ನು ದಾವೆದಾರರ ಹೆಸರಿಗೆ ನೋಂದಣಿ ಮಾಡಿಕೊಡಬೇಕು ಅಥವಾ ಪರ್ಯಾಯವಾಗಿ 27.2 ಲಕ್ಷ ರೂ. ಮೊತ್ತವನ್ನು ವಾರ್ಷಿಕ ಶೇ.9ರ ಬಡ್ಡಿ ದರದೊಂದಿಗೆ ಪಾವತಿಸುವಂತೆ ಆಯೋಗ ಆದೇಶಿಸಿತ್ತು.
ಆದರೆ, ಆಯೋಗದ ಆದೇಶವನ್ನು ಅಮೃತ್ ಶೆಣೈ ಪಾಲಿಸದ ಹಿನ್ನೆಲೆಯಲ್ಲಿ ಸಂತೋಷ್ ಪೈ ಅವರು ಎಕ್ಸಿಕ್ಯೂಷನ್ ಕೇಸ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗ ಅಮೃತ್ ಶೆಣೈ ಉದ್ದೇಶಪೂರ್ವಕವಾಗಿ ಆದೇಶ ಪಾಲಿಸದೇ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಪರಿಗಣಿಸಿ, ಆರೋಪಿಗೆ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ, 1 ಲಕ್ಷ ರೂ. ದಂಡ ಹಾಗೂ ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಇದೇ ವೇಳೆ ಆರೋಪಿಯನ್ನು ಆಯೋಗದ ಮುಂದೆ ಹಾಜರುಪಡಿಸುವಂತೆ ಬಂಧನ ವಾರಂಟ್ ಜಾರಿಗೊಳಿಸಲಾಗಿದ್ದು, ಅದರಂತೆ ಅಮೃತ್ ಶೆಣೈ ಆಯೋಗದ ಮುಂದೆ ಹಾಜರಾಗಿದ್ದು. ವಿಚಾರಣೆ ನಡೆಸಿದ ಆಯೋಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತು. ಬಳಿಕ ಅವರನ್ನು ಹಿರಿಯಡ್ಕ ಕಾರಾಗೃಹಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ನಗರದ ಹೃದಯಭಾಗದಲ್ಲಿ ಅಮೃತ್ ಶೆಣೈ ಫ್ಲ್ಯಾಟ್ ಕಟ್ಟಿದ್ದು, ನಂತರ ಅದರ ಮಾಲೀಕತ್ವವನ್ನು ವಾರೀಸುದಾರರಿಗೆ ನೀಡುವಲ್ಲಿ ವಿಫಲರಾಗಿದ್ದರು. ನಮಗೆ ವಂಚಿಸಿದ್ದಾರೆ ಎಂದು ಫ್ಲ್ಯಾಟ್‌ಗೆ ಹೂಡಿಕೆ ಮಾಡಿದ್ದ ಗ್ರಾಹಕರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅದಾದ ಬಳಿಕವೂ ಅಮೃತ್ ಶೆಣೈ ಸಾಮಾಜಿಕ ಜಾಲತಾಣ ಹಾಗೂ ಕೇಂದ್ರದ ಬಿಜೆಪಿ ಸರಕಾರದ ವಿರುದ್ದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.
