ಲೋಕಬಂಧು ನ್ಯೂಸ್ | ಉಡುಪಿ, ಜೂ. 25
ಕ್ರಿ.ಶ.18೦೦ರಲ್ಲಿ ಸ್ಥಾಪನೆಯಾದ ಕಾಡಬೆಟ್ಟು ಶ್ರೀ ಅಬ್ಬಗದಾರಗ ವೀರಭದ್ರ ಸಪರಿವಾರ ಶನೈಶ್ಚರ ದೇವಳದ ಸಮಗ್ರ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಸಂಕಲ್ಪಿಸಲಾಗಿದ್ದು, ಜೂ.27ರಂದು ಚಾಲನೆ ನೀಡಲಾಗುವುದು ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಉದಯಕುಮಾರ್ ಶೆಟ್ಟಿ ತಿಳಿಸಿದರು.
ದೇವಳದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಅಪೂರ್ವವಾದ ಈ ಕ್ಷೇತ್ರದ ಜೀರ್ಣೋದ್ಧಾರಕ್ಕಾಗಿ ಸಮಿತಿ ರಚಿಸಲಾಗಿದ್ದು, ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಸಾಮ್ರಾಟ್ ಗೌರವಾಧ್ಯಕ್ಷರಾಗಿದ್ದಾರೆ. ಸಮಾಜದ ಗಣ್ಯರನ್ನೊಳಗೊಂಡ ವಿವಿಧ ಸಮಿತಿ ರಚಿಸಲಾಗಿದೆ. ಸರ್ವರ ಸಹಭಾಗಿತ್ವದಿಂದ ಜೀರ್ಣೋದ್ಧಾರ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ ಎಂದರು.
ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕುಮಾರಗುರು ತಂತ್ರಿ ಮಾತನಾಡಿ, ಶನೈಶ್ಚರ ದೇವರ ಮೂರ್ತಿ ಹೊರತುಪಡಿಸಿ ಕ್ಷೇತ್ರದಲ್ಲಿರುವ ಎಲ್ಲ ದೇವರ ಮೂರ್ತಿ ದಾರು (ಮರ) ಶಿಲ್ಪದ್ದಾಗಿದ್ದು, ಅಪೂರ್ವವಾದ ಗಣಪತಿಯ ವಿಗ್ರಹವೂ ದಾರುಶಿಲ್ಪದ್ದಾಗಿದೆ. 1976 ಮತ್ತು 2009ರಲ್ಲಿ ಬ್ರಹ್ಮಕಲಶೋತ್ಸವ ನಡೆದ ಇತಿಹಾಸವಿದ್ದು, ಇದೀಗ ಮತ್ತೊಮ್ಮೆ ಕ್ಷೇತ್ರದಲ್ಲಿ ಕೆಲವು ಮಾರ್ಪಾಡುಗಳೊಂದಿಗೆ, ಮೂಲ ಮೂರ್ತಿಯನ್ನು ಹಾಗೇ ಇರಿಸಿಕೊಂಡು ಜೀರ್ಣವಾದ ಮೂರ್ತಿಗಳ ಭಾಗಗಳನ್ನು ಶಾಸ್ತ್ರೋಕ್ತವಾಗಿ ಸರಿಪಡಿಸಲು ಉದ್ದೇಶಿಸಲಾಗಿದೆ.
ಜೂ.27ರಂದು ಶನಿ ತ್ರಯೋದಶಿ ಶುಭ ದಿನದಂದು ಸಾಮೂಹಿಕ ಶನಿ ಶಾಂತಿ, ಕ್ಷೇತ್ರದ ಎಲ್ಲಾ ದೇವರಿಗೆ ವಿಶೇಷ ಪೂಜೆ, ಸಮಷ್ಟಿ ಪ್ರಾರ್ಥನೆ ನಡೆಸಿ, ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಬ್ರಹ್ಮಕಲಶಾಭಿಷೇಕದ ದಿನಾಂಕವನ್ನು ಉದ್ಘೋಷಿಸಲಿದ್ದಾರೆ. ಆ ಮೂಲಕ ಬ್ರಹ್ಮಕಲಶೋತ್ಸವದ ಪೂರಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ ಎಂದರು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೈಕಾಡಿ ಸುಪ್ರಸಾದ ಶೆಟ್ಟಿ, ಉಪಾಧ್ಯಕ್ಷರಾದ ಮೋಹನ ಶೆಟ್ಟಿ ಮತ್ತು ರವಿ ಶೆಟ್ಟಿ, ಸಂಚಾಲಕರಾದ ರಾಜಗೋಪಾಲ ರೈ ಮತ್ತು ಸುರೇಂದ್ರ ಶೇಖ, ಸಂಘಟನಾ ಕಾರ್ಯದರ್ಶಿ ಸಚಿನ್ ರಾಜ್ ರೈ, ಜೊತೆ ಕಾರ್ಯದರ್ಶಿ ಮಧುಕರ ಮುದ್ರಾಡಿ ಮೊದಲಾದವರಿದ್ದರು.
.jpg)
.jpg)
.jpg)