ಲೋಕಬಂಧು ನ್ಯೂಸ್ | ಉಡುಪಿ, ಜೂ.28
ಯಕ್ಷಗಾನ ಕಲೆ ಮತ್ತು ಕಲಾವಿದರಿಗಾಗಿ ಕಾರ್ಯನಿರ್ವಹಿಸುವ ಉಡುಪಿ ಯಕ್ಷಗಾನ ಕಲಾರಂಗ ತನ್ನ 'ವಿದ್ಯಾಪೋಷಕ್' ಯೋಜನೆಯಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸುವ ಕೆಲಸ ಮಾಡುತ್ತಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.ಸಂಸ್ಥೆ ನಿರ್ಮಿಸಿದ 100ನೇ ಮನೆಯ ಹಸ್ತಾಂತರ ಹಿನ್ನೆಲೆಯಲ್ಲಿ ಭಾನುವಾರ ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ನಡೆದ 'ಸೂರು ನೂರರ ಸಡಗರ' ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಪ್ರತಿಯೊಬ್ಬರಿಗೂ ಜೀವನದಲ್ಲಿ ಮನೆ ಕಟ್ಟಬೇಕೆಂಬ ಹಂಬಲ ಇದ್ದೇ ಇರುತ್ತದೆ. ಒಂದು ಮನೆ ಕಟ್ಟಿಸಿಕೊಳ್ಳುವುದೇ ದುಸ್ತರವಾಗಿರುವ ಈ ದಿನಗಳಲ್ಲಿ 100 ಮನೆಗಳನ್ನು ಕಟ್ಟಿಸಿಕೊಡುವ ಮೂಲಕ ಸಂಸ್ಥೆ ಅಗಾಧ ಸಾಧನೆ ಮಾಡಿದೆ. ಸಮಾಜದ ದಾನಿಗಳ ಸಹಕಾರ ಹಾಗೂ ಸಂಸ್ಥೆಯ ನಿಷ್ಠಾವಂತ ಕಾರ್ಯಕರ್ತರ ಸ್ವಾರ್ಥರಹಿತ ಸೇವೆಯೇ ಅದಕ್ಕೆ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಕ್ಷಗಾನ ಕಲಾರಂಗ ಕೇವಲ ಯಕ್ಷಗಾನಕ್ಕೆ ಸೀಮಿತವಾಗದೆ ಕಲಾವಿದರ ಪೋಷಣೆ, ಯಕ್ಷಗಾನ ಕಲಿಕೆ, ವಿದ್ಯಾಪೋಷಕ್'ನಂಥ ಕಾರ್ಯಕ್ರಮಗಳಲ್ಲೂ ತೊಡಗಿಕೊಂಡಿದೆ.
ತಮ್ಮ ಕಷ್ಟದಲ್ಲಿ ಸಹಕರಿಸಿದ ಸಂಸ್ಥೆಗೆ ಜೀವನದಲ್ಲಿ ಉತ್ಕರ್ಷ ಕಂಡಾಗ ಸಹಕರಿಸುವ ಉಪಕೃತ ಮನೋಭಾವವನ್ನು ಫಲಾನುಭವಿಗಳು ಮೈಗೂಡಿಸಿಕೊಳ್ಳಬೇಕು ಎಂದು ಶ್ರೀಗಳು ಕವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಅನ್ಯರ ಬದುಕಿಗಾಗಿ ಬಾಳವುದೇ ನೈಜ ಬದುಕು ಎಂಬ ಮಾತಿಗೆ ಪೂರಕವಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಮಣಿಪಾಲ ಮಾಹೆ ಕೂಡಾ ಅದರೊಂದಿಗೆ ಕೈಜೋಡಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಸೂರಿಲ್ಲದ ವಿದ್ಯಾರ್ಥಿಗಳಿಗೆ ಮನೆ ನಿರ್ಮಾಣದಲ್ಲಿ ಮಾಹೆ ಸಹಕರಿಸಲಿದೆ ಎಂದರು.
ಸಂಪುಟ ಅನಾವರಣ
ಸೂರು ನೂರರ ಚಿತ್ರ ಸಂಪುಟ ಅನಾವರಣ ಮಾಡಿದ ಕರ್ಣಾಟಕ ಬ್ಯಾಂಕ್ ಎಂ.ಡಿ ಮತ್ತು ಸಿಇಓ ಎಂ. ರಾಘವೇಂದ್ರ ಭಟ್, ಪ್ರಧಾನಿ ಆಶಯದ 2047ರ ವೇಳೆಗೆ ಎಲ್ಲರಿಗೂ ಮನೆ ಮತ್ತು ವಿಮೆ ಯೋಜನೆ ಈಡೇರಲಿ ಎಂದು ಆಶಿಸಿದರು.
ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಯಶಪಾಲ್ ಸುವರ್ಣ, ಕಿರಣ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ ಅಭ್ಯಾಗತರಾಗಿ ಆಗಮಿಸಿ, ಸಂಸ್ಥೆಯ ಕೊಡುಗೆಯನ್ನು ಕೊಂಡಾಡಿದರು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಗಾನ ಕಲಾರಂಗದ ಮಾಜಿ ಅಧ್ಯಕ್ಷ ಕೆ.ಗಣೇಶ ರಾವ್ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮನೆಗಳ ಪ್ರಾಯೋಜಕರು ಮತ್ತು ಕಾರ್ಮಿಕರನ್ನು ಗೌರವಿಸಲಾಯಿತು. ಫಲಾನುಭವಿ ವಿದ್ಯಾರ್ಥಿಗಳಿಗೆ ಕಸಿ ಮಾವಿನ ಗಿಡ ವಿತರಿಸಲಾಯಿತು. ದಾನಿಗಳ ಪರವಾಗಿ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಮತ್ತು ಡಾ.ಮಹಾಬಲೇಶ್ವರ ರಾವ್ ಹಾಗೂ ಫಲಾನುಭವಿಗಳ ಪರವಾಗಿ ಕಾವ್ಯ ಎಚ್.ಆರ್. ಅನಿಸಿಕೆ ವ್ಯಕ್ತಪಡಿಸಿದರು.
ಉಪಾಧ್ಯಕ್ಷರಾದ ಎಸ್.ವಿ. ಭಟ್, ಪಳ್ಳಿ ಕಿಶನ್ ಹೆಗ್ಡೆ ಮತ್ತು ವಿ.ಜಿ.ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ಪದಾಧಿಕಾರಿ ವಿದ್ಯಾ ಪ್ರಸಾದ್ ಸಹಕರಿಸಿದರು.
.jpg)
.jpg)
.jpg)