ತುರ್ತು ಪರಿಸ್ಥಿತಿ ಸಂವಿಧಾನದ ಮೌಲ್ಯಗಳ ಮೇಲಿನ ದಾಳಿ

ಲೋಕಬಂಧು ನ್ಯೂಸ್ | ಉಡುಪಿ, ಜೂ.26
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ನೇರ ದಾಳಿ ಎಂದು ಉಡುಪಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ, ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ 'ಸಂವಿಧಾನ ಹತ್ಯಾ ದಿವಸ್' ಕರಾಳ ದಿನಾಚರಣೆಯಲ್ಲಿ ಮಾತನಾಡಿದರು.


ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ 'ಸಂಪೂರ್ಣ ಕ್ರಾಂತಿ' ಚಳುವಳಿ ದೇಶಾದ್ಯಂತ ಹಬ್ಬಿತ್ತು. ಇಂದಿರಾ ಗಾಂಧಿ ರಾಜೀನಾಮೆ ನೀಡಬೇಕೆಂಬ ಒತ್ತಡ ಹೆಚ್ಚಾಗಿತ್ತು. ಸಂವಿಧಾನದ 19ನೇ ವಿಧಿಯಡಿ ವಾಕ್, ಅಭಿವ್ಯಕ್ತಿ, ಸಭೆ ಸೇರುವ ಹಕ್ಕು ಸ್ಥಗಿತವಾಯಿತು.


ವಿರೋಧ ಪಕ್ಷದ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಜಾರ್ಜ್ ಫೆರ್ನಾಂಡಿಸ್, ಜಯಪ್ರಕಾಶ್ ನಾರಾಯಣ್ ಸೇರಿದಂತೆ ಸಾವಿರಾರು ಮಂದಿಯನ್ನು 'ಮೀಸ' ಕಾಯ್ದೆಯಡಿ ಬಂಧಿಸಲಾಯಿತು. ಪತ್ರಿಕೆಗಳಿಗೆ ಸೆನ್ಸಾರ್ ಮಾಡುವಂತೆ ಆದೇಶವಾಯಿತು. ಸರ್ಕಾರದ ವಿರುದ್ಧ ಬರೆಯುವ ಪತ್ರಿಕೆಗಳ ಮೇಲೆ ಒತ್ತಡ, ವಿದ್ಯುತ್ ಕಡಿತ, ಕಾಗದ ಪೂರೈಕೆ ನಿಲ್ಲಿಸುವ ಕ್ರಮಗಳು ನಡೆದವು.


ನ್ಯಾಯಾಧೀಶರ ವರ್ಗಾವಣೆ, ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಯಿತು. ಸಂಜಯ್ ಗಾಂಧಿ ಅವರ 5 ಅಂಶದ ಕಾರ್ಯಕ್ರಮಗಳಾದ ಬಲವಂತದ ಸಂತಾನ ನಿಯಂತ್ರಣ, ಕೊಳೆಗೇರಿ ತೆರವು ಮುಂತಾದ ಕ್ರಮಗಳಿಂದ ಗ್ರಾಮೀಣ ಜನರಲ್ಲಿ ಭಯ ಹುಟ್ಟಿತು. ಕೈಗಾರಿಕೆಗಳು, ಸರ್ಕಾರಿ ಕಚೇರಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು ಎಂದು ಮಟ್ಟಾರು ಸ್ಮರಿಸಿದರು.


1977ರಲ್ಲಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹಿಂಪಡೆದು ಚುನಾವಣೆ ಘೋಷಿಸಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತು ಜನತಾ ಪಕ್ಷ ಅಧಿಕಾರಕ್ಕೆ ಬಂದ ಪರಿಣಾಮವಾಗಿ 44ನೇ ಸಂವಿಧಾನ ತಿದುಪಡಿ ತರಲಾಯಿತು. 'ಆಂತರಿಕ ಗೊಂದಲ' ಬದಲಿಗೆ 'ಸಶಸ್ತ್ರ ದಂಗೆ' ಮಾತ್ರ ತುರ್ತು ಪರಿಸ್ಥಿತಿಗೆ ಕಾರಣವಾಗಬಹುದು. ಸಂಸತ್ತಿನ ಅನುಮೋದನೆ ಕಡ್ಡಾಯ, ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗದು ಎಂಬ ಬದಲಾವಣೆಗಳಾದವು.


1975ರಿಂದ 1977ರ ವರೆಗೆ 21 ತಿಂಗಳ ಪರ್ಯಂತ ನಡೆದ ಕರಾಳ ತುರ್ತು ಪರಿಸ್ಥಿತಿ ಭಾರತೀಯರಿಗೆ ಪ್ರಜಾಪ್ರಭುತ್ವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎಷ್ಟು ಮೌಲ್ಯಯುತ ಎಂಬುದನ್ನು ನೆನಪಿಸುವ ಘಟನೆಯಾಗಿ, ದೇಶದ ಇತಿಹಾಸದಲ್ಲಿ ಶಾಶ್ವತ ಕಪ್ಪುಚುಕ್ಕೆಯಾಗಿ ಉಳಿದಿದೆ ಎಂದು ಮಟ್ಟಾರು ವ್ಯಾಖ್ಯಾನಿಸಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮೊದಲಾದವರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.