ಆರೋಗ್ಯವಂತ ಮಕ್ಕಳು ಭವಿಷ್ಯದ ಸದೃಢ ಪ್ರಜೆಗಳು

ಲೋಕಬಂಧು ನ್ಯೂಸ್ | ಉಡುಪಿ, ಜೂ.28
ಭಾರತ ಪೋಲಿಯೊ ಮುಕ್ತ ದೇಶವಾಗಿದ್ದು ಪೋಲಿಯೊ ರೋಗವನ್ನು ಪರಿಣಾಮಕಾರಿಯಾಗಿ ನಿರ್ಮೂಲನೆ ಮಾಡುವಲ್ಲಿ ವಿಶ್ವದ ಇತರ ಎಲ್ಲಾ ದೇಶಗಳಿಗೆ ಮಾದರಿಯಾಗಿದೆ. ದೇಶದ ಭವಿಷ್ಯವಾಗಿರುವ ಮಕ್ಕಳು ಸದೃಢರಾಗಿರಬೇಕು ಎನ್ನುವ ಉದ್ದೇಶದಿಂದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸದೃಢ, ಆರೋಗ್ಯವಂತ ಮಕ್ಕಳು ಭವಿಷ್ಯದ ನಾಯಕರಾಗಿ ರೂಪುಗೊಂಡು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕು ಎಂದು ಶಾಸಕ ಯಶಪಾಲ್ ಸುವರ್ಣ ಆಶಿಸಿದರು.
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ವಿವಿಧ ಇಲಾಖೆಗಳು ಹಾಗೂ ಸಂಘಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ ವಿಶ್ವದ ಇನ್ನಿತರ ದೇಶಗಳಲ್ಲಿ ಪೋಲಿಯೊ ಪ್ರಕರಣಗಳು ಕಂಡುಬರುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿವರ್ಷವೂ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 60 ಸಾವಿರಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಪೋಲಿಯೊ ಬಗ್ಗೆ ಜಾಗೃತಿ ಮೂಡಿಸಿ ಮಕ್ಕಳು ತಪ್ಪದೇ ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆ, ಆರೋಗ್ಯ ಕ್ಷೇತ್ರದಲ್ಲಿಯೂ ಅಗ್ರಸ್ಥಾನದಲ್ಲಿರಬೇಕು ಎಂದರು.
ತಾಯಿ ಮಕ್ಕಳ ಆಸ್ಪತ್ರೆಗೆ ಹೊಸ ರೂಪ
ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ಹೊಸ ರೂಪ ನೀಡುವ ಪ್ರಯತ್ನ ನಡೆಯುತ್ತಿದೆ. ಆರೋಗ್ಯ ಸಚಿವದೊಂದಿಗೆ ಚರ್ಚಿಸಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆಯ ಮೂಲ ಸೌಕರ್ಯ ಸಹಿತ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆದಿದೆ. ಶೀಘ್ರದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಜಿಲ್ಲೆಗೆ ಭೇಟಿ ನೀಡಲಿದ್ದು ಸಮಸ್ಯೆಗಳಿಗೆ ಮುಕ್ತಿ ನೀಡುವ ಕಾರ್ಯವಾಗಲಿದೆ. ಜಿಲ್ಲಾಸ್ಪತ್ರೆಗೆ ನಿಗದಿಪಡಿಸಿದ ಸ್ಥಳದ ಸಮಸ್ಯೆ ಪರಿಹರಿಸಲು ಸಚಿವರಿಗೆ ಮನವಿ ಮಾಡಲಾಗುವುದು ಎಂದು ಶಾಸಕ ಯಶಪಾಲ್ ತಿಳಿಸಿದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಆರೋಗ್ಯ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದಿಂದ ದೇಶ ಇಂದು ಪೋಲಿಯೊ ಹಾಗೂ ಸಿಡುಬು ರೋಗ ಮುಕ್ತವಾಗಿದೆ. ದೇಶವನ್ನು ಕ್ಷಯರೋಗ ಮುಕ್ತವಾಗಿಸಲು ಪಣತೊಟ್ಟಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗ, ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಸಂಘಸಂಸ್ಥೆಗಳ ಸಹಕಾರದೊಂದಿಗೆ ಲಸಿಕೆ ಕಾರ್ಯಕ್ರಮಗಳು ಯಶಸ್ವಿಯಾಗಿವೆ ಎಂದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ, ಬಿಬಿಎಂಪಿ ಉಪನಿರ್ದೇಶಕಿ ಡಾ.ಮಮತಾ ಎಂ.ಎಸ್., ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್., ರೋಟರಿ ಪ್ಲಸ್ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಾಸ್ರಿ ಮೊದಲಾದವರಿದ್ದರು.


ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಜ್ಯೋತ್ಸ್ನಾ ಬಿ.ಕೆ. ಸ್ವಾಗತಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್. ನಿರೂಪಿಸಿದರು. ರೋಟರಿ ಅಧ್ಯಕ್ಷ ಸೂರಜ್ ಕುಮಾರ್ ಹೆಗ್ಡೆ ವಂದಿಸಿದರು.