ಲೋಕಬಂಧು ನ್ಯೂಸ್ | ಉಡುಪಿ, ಜೂ.28
ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಉಡುಪಿ ಘಟಕ ಹಾಗೂ ಮಹಿಳಾ ವಿಭಾಗ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ದಶಮ ಸಂಭ್ರಮದ ನೆನಪಿನಲ್ಲಿ ಶನಿವಾರ ಪುರಭವನದಲ್ಲಿ ನಡೆದ ದ್ವಿತೀಯ ವರ್ಷದ ತೆಂಕುತಿಟ್ಟಿನ ಸಮುದ್ರ ಮಥನ ಯಕ್ಷಗಾನ ಕಾರ್ಯಕ್ರಮದಲ್ಲಿ ಹೈದರಾಬಾದ್ ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಯಕ್ಷಧ್ರುವ ಕಲಾ ಗೌರವಾರ್ಪಣೆ ಉಪಾದಿಯೊಂದಿಗೆ ಗೌರವಿಸಲಾಯಿತು.
ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.
ಮಾಹೆ ಪೂರ್ಣ ಸಹಕಾರ
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಮಣಿಪಾಲ ಆರೋಗ್ಯ ಕಾರ್ಡ್ ಚಾಲ್ತಿಗೆ ಬಂದು ಸುವರ್ಣ ಸಂಭ್ರಮದ ಕಾಲಘಟ್ಟದಲ್ಲಿ ಫೌಂಡೇಶನ್ ಮನವಿಯಂತೆ ಯಕ್ಷಗಾನ ಕಲಾವಿದರು ಮತ್ತು ಕುಟುಂಬದವರಿಗೆ 2,750 ಕಾರ್ಡ್'ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಮುಂದೆಯೂ ಫೌಂಡೇಶನ್‌ನ ಆರೋಗ್ಯ ಸಂಬಂಧಿ ಯೋಜನೆಗಳಿಗೆ ಮಾಹೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಲಾವಿದರಿಗೆ ಪ್ರೋತ್ಸಾಹ ಅಗತ್ಯ
ಪ್ರಶಸ್ತಿ ಸ್ವೀಕರಿಸಿದ ಕೃಷ್ಣಮೂರ್ತಿ ಮಂಜ, ಕಲಾವಿದರನ್ನು ಗೌರವಿಸುವುದೆಂದರೆ ಕಲೆಗೆ ಗೌರವ ಸಲ್ಲಿಸಿದಂತೆ. ಪುರಾಣ, ಇತಿಹಾಸ ಮತ್ತು ಸಂಸ್ಕೃತಿಯನ್ನು ಮನಮುಟ್ಟುವ ರೀತಿಯಲ್ಲಿ ಜನತೆಗೆ ತಲುಪಿಸುವ ಅಪೂರ್ವ ಕಲೆಯಾದ ಯಕ್ಷಗಾನ ಸಂಗೀತ, ನೃತ್ಯ, ಅಭಿನಯ, ವೇಷಭೂಷಣ ಮತ್ತು ಸಾಹಿತ್ಯದ ಸಮನ್ವಯದಿಂದ ಕೂಡಿರುವ ಹೆಮ್ಮೆಯ ಸಾಂಸ್ಕೃತಿಕ ಪರಂಪರೆ. ಇಂಥ ಸರ್ವಾಂಸುಂದರ ಮತ್ತು ಸಮೃದ್ಧ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಕಲಾವಿದರಿಗೆ ಅಗತ್ಯ ಪ್ರೋತ್ಸಾಹ, ಗೌರವ ಮತ್ತು ಆರ್ಥಿಕ ಭದ್ರತೆ ಒದಗಿಸಬೇಕು.
ಸಮಾಜ ಕಲೆ ಮತ್ತು ಕಲಾವಿದರನ್ನು ಗೌರವಿಸಿದಾಗ ಯಕ್ಷಗಾನದಂಥ ಕಲೆ ಸಮೃದ್ಧಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ಆಗ ಕಲಾವಿದರೂ ಗೌರವಯುತ ಮತ್ತು ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಯಕ್ಷಗಾನ ಉಳಿಯಬೇಕಾದರೆ ಕಲಾವಿದರು ತಮ್ಮನ್ನು ಸಂಪೂರ್ಣವಾಗಿ ಈ ಕಲೆಗೆ ಸಮರ್ಪಿಸಿಕೊಳ್ಳಬೇಕು. ಅದೇ ರೀತಿ ಯಕ್ಷಗಾನವನ್ನು ಆಸ್ವಾದಿಸುವ ಪ್ರೇಕ್ಷಕರೂ ಸುಸಂಸ್ಕೃತರಾಗಿ ಕಲೆಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಟ್ರಸ್ಟ್ ಸ್ಥಾಪನೆ
ಬೇಸಿಗೆಯಲ್ಲಿ ಮೇಳಗಳಲ್ಲಿ ಕಲಾವಿದರಿಗೆ ಉದ್ಯೋಗ ಮತ್ತು ವೇತನ ದೊರೆಯುತ್ತದೆ. ಆದರೆ, ಮಳೆಗಾಲದಲ್ಲಿ ಬಹುತೇಕ ಕಲಾವಿದರು ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಸೇರಿದಂತೆ ವಿವಿಧ ಉದ್ಯೋಗಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಿಸುತ್ತಾರೆ. ಈ ಸಂಕಷ್ಟವನ್ನು ಮನಗಂಡು ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಫೌಂಡೇಶನ್ ಸ್ಥಾಪಿಸಿ, ವಿವಿಧ ಕಲ್ಯಾಣ ಯೋಜನೆಗಳನ್ನು ರೂಪಿಸಿ ಅಗತ್ಯ ನೆರವು ಮತ್ತು ಸಹಕಾರ ನೀಡಲಾಗುತ್ತಿದೆ. ಆ ಮೂಲಕ ಯಕ್ಷಗಾನ ಕಲೆಯ ಉಳಿವು, ಬೆಳವಣಿಗೆ ಮತ್ತು ಕಲಾವಿದರ ಬದುಕಿನ ಭದ್ರತೆಗೆ ಸಂಸ್ಥೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಪಟ್ಲ ಸತೀಶ ಶೆಟ್ಟಿ ತಿಳಿಸಿದರು.
ಸಮಿತಿ ಗೌರವಾಧ್ಯಕ್ಷ ಪಿ.ಪುರುಷೋತ್ತಮ ಶೆಟ್ಟಿ, ಉದ್ಯಮಿ ಸಾಯಿರಾಧಾ ಮನೋಹರ ಎಸ್. ಶೆಟ್ಟಿ, ಕೊಡವೂರು ತೋಟದಮನೆ ದಿವಾಕರ ಶೆಟ್ಟಿ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ, ಮಹಿಳಾ ಘಟಕದ ಅಧ್ಯಕ್ಷೆ ನಿರೂಪಮಾ ಪ್ರಸಾದ್ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ ಉಪಸ್ಥಿತರಿದ್ದರು.
ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ದಾಮೋದರ ಶರ್ಮ ಬಾರಕೂರು ನಿರೂಪಿಸಿದರು. ಕಲಾಪೋಷಕ ಸುಧಾಕರ ಆಚಾರ್ಯ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಹಿರಿಯ ಕಲಾವಿದ ಇಂದ್ರಾಳಿ ಪ್ರಭಾಕರ ಆಚಾರ್ಯ ಅವರಿಗೆ ವತಿಯಿಂದ 25 ಸಾವಿರ ರೂ. ಧನಸಹಾಯ ಹಸ್ತಾಂತರಿಸಲಾಯಿತು.
