ಲೋಕಬಂಧು ನ್ಯೂಸ್, ಪಡುಬಿದ್ರಿ
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ಮೊಗವೀರ ಸಮಾಜದ ಗುರುಪರಂಪರೆಯ ಕೊನೆಯ ಗುರುಗಳೂ ಉಚ್ಚಿಲ ದೇವಳದ ಸಂಸ್ಥಾಪಕರೂ ಆಗಿರುವ ಶ್ರೀ ಮಾಧವಮಂಗಳ ಪೂಜಾರ್ಯರ ಕಂಚಿನ ಪುತ್ಥಳಿ ನಿರ್ಮಾಣ ಅಂಗವಾಗಿ ಮಾರ್ಚ್ 1ರಂದು ಸಾಮೂಹಿಕ ಶ್ರೀ ಗುರು ಪಾದಕಾಣಿಕೆ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9.30 ಗಂಟೆಗೆ ಶ್ರೀ ದೇವಳದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ನೇತೃತ್ವದಲ್ಲಿ ನಾಡೋಜ ಡಾ.ಜಿ.ಶಂಕರ್ ಅವರ ಮಾರ್ಗದರ್ಶನದಲ್ಲಿ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಐತಿಹಾಸಿಕ ಕಾರ್ಯ
ಸಮಾಜದ ಕುಲಗುರುಗಳ ಕಂಚಿನ ಪುತ್ಥಳಿ ನಿರ್ಮಾಣದ ಐತಿಹಾಸಿಕ ಹಾಗೂ ಪುಣ್ಯಪ್ರದವಾದ ಈ ಕಾರ್ಯದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶಕ್ತ್ಯಾನುಸಾರ ಶ್ರೀ ಗುರು ಪಾದಕಾಣಿಕೆ ಸಮರ್ಪಿಸುವ ಮೂಲಕ ಶ್ರೀದೇವಿ ಹಾಗೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಪುತ್ಥಳಿ ನಿರ್ಮಾಣ ಸಮಿತಿ ಪ್ರಕಟನೆ ತಿಳಿಸಿದೆ.
ಉಚ್ಚಿಲ ದೇವಳ ಸ್ಥಾಪಕ
ಸುಮಾರು ಸಾವಿರ ವರ್ಷಗಳ ದೀರ್ಘೇತಿಹಾಸವಿರುವ ಮೊಗವೀರ ಸಮಾಜದ ಗುರುಪರಂಪರೆಯಲ್ಲಿ ಒಂಭತ್ತು ತಲೆಮಾರಿನ ಗುರುಗಳು ಸಮಾಜದ ಧಾರ್ಮಿಕ, ಸಾಮಾಜಿಕ, ಅಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಬದುಕಿಗೆ ಅಮೂಲ್ಯ ಕೊಡುಗೆ ನೀಡಿರುವವರ ಪೈಕಿ ಕೀರ್ತಿಶೇಷ ಶ್ರೀ ಮಾಧವಮಂಗಳ ಪೂಜಾರ್ಯರು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸ್ಥಾಪಕರು. ಅವರು 1966ರ ಮಾ. 31ರಂದು ಕೀರ್ತಿಶೇಷರಾದರು.
ಸ್ವಾಭಿಮಾನದ ಸಂಕೇತ
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ, ಕೀರ್ತಿಶೇಷ ಶ್ರೀ ಮಾಧವಮಂಗಳ ಪೂಜಾರ್ಯರ ಬೃಹತ್ ಕಂಚಿನ ಪುತ್ಥಳಿಯನ್ನು ದೇವಸ್ಥಾನದ ಆವರಣದಲ್ಲಿ ನಿರ್ಮಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಪುತ್ಥಳಿ ಸಮಾಜದ ಏಕತೆ, ಸ್ವಾಭಿಮಾನ ಹಾಗೂ ಗುರುಭಕ್ತಿಯ ಸಂಕೇತವಾಗಿ ಮೂಡಿಬರಲಿದೆ.
