ಸ್ವಾವಲಂಬಿ ಸ್ವಸ್ಥ ಸಮಗ್ರ ಭಾರತದ ಬಜೆಟ್‌

ಲೋಕಬಂಧು ನ್ಯೂಸ್, ಉಡುಪಿ
ಸ್ವಾವಲಂಬಿ ಸ್ವಸ್ಥ ಭಾರತದ ಬಜೆಟ್ ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಘದ ಉಡುಪಿ ಶಾಖೆಯ ಮಾಜಿ ಅಧ್ಯಕ್ಷ ನರಸಿಂಹ ನಾಯಕ್ ಹೇಳಿದ್ದಾರೆ.
ಭಾರತದ ಪ್ರತೀ ಹಳ್ಳಿ, ಪಟ್ಟಣ ಮತ್ತು ನಗರಗಳ ನಾಗರಿಕರ ಕನಸನ್ನು ಸಬಲೀಕರಣಗೊಳಿಸುವ ಮತ್ತು ನನಸಾಗಿಸುವ ಗುರಿ ಹೊಂದಿದ ಸುಮಾರು 53.5 ಲಕ್ಷ ಕೋಟಿ ಗಾತ್ರದ ಬಜೆಟ್ ಇದಾಗಿದ್ದು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ದೃಷ್ಟಿಕೋನ ಹೊಂದಿದೆ.


ಪ್ರಮುಖವಾಗಿ ವಿತ್ತೀಯ ಕೊರತೆಯನ್ನು 4.4 ಶೇ.ದಿಂದ 4.3 ಶೇ.ಕ್ಕೆ ಇಳಿಸುವ ಮೂಲಕ ಸಾಲದ ಮಟ್ಟ ಕಡಿಮೆ ಮಾಡುವ ಜೊತೆ ಜೊತೆಗೆ ಬಂಡವಾಳ ವೆಚ್ಚವನ್ನು 12.2 ಲಕ್ಷ ಕೋಟಿಗೆ ಏರಿಕೆ ಮಾಡಿ ಆರ್ಥಿಕ ಬಲವರ್ಧನೆಯ ಹಾದಿಯಲ್ಲಿ ಮುಂದುವರಿದಿದೆ.


ಆದಾಯ ತೆರಿಗೆ ಸ್ಲಾಬ್'ನಲ್ಲಿ ಯಾವುದೇ ವ್ಯತ್ಯಾಸವಿಲ್ಲದಿದ್ದರೂ ಮೋಟಾರು ಅಪಘಾತ ಪರಿಹಾರ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ, ಕ್ಲವ್ಡ್  ಕಂಪನಿಗಳಿಗೆ ತೆರಿಗೆ ರಜೆ ನೀಡಲಾಗಿದೆ. ಕ್ಯಾನ್ಸರ್ ಸಂಬಂಧಿತ ಔಷಧಗಳಿಗೆ, ಮೀನುಗಾರಿಕೆ ವಲಯಕ್ಕೆ ಸುಂಕ ವಿನಾಯಿತಿ ನೀಡಿ ಸರಕು ಮತ್ತು ಸೇವಾ ತೆರಿಗೆ ಸಂಬಂಧಿತ ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸಲಾಗಿದೆ.


ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ವಿಶೇಷ ಪ್ರೋತ್ಸಾಹ,ಸಾಲ ಸೌಲಭ್ಯ, ಬಡ್ಡಿ ಸಹಾಯ, ತಂತ್ರಜ್ಞಾನ ಉನ್ನತಿ ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ಸಹಕಾರ ನೀಡುವ ಕ್ರಮಗಳನ್ನು ಘೋಷಿಸಲಾಗಿದೆ. ಅದರಿಂದ ಉದ್ಯೋಗಾವಕಾಶ ಹೆಚ್ಚಾಗಲಿದ್ದು, ಆರ್ಥಿಕ ಬೆಳವಣಿಗೆಗೆ ವೇಗ ಸಿಗಲಿದೆ.


ಗೋಡಂಬಿ, ತೆಂಗಿನಕಾಯಿ, ಕೋಕೋನಂಥ ವಾಣಿಜ್ಯ ಬೆಳೆಗಳ ಅಭಿವೃದ್ಧಿಗೆ ಅನುದಾನ, ಆಯುರ್ವೇದ ಏಮ್ಸ್, ಪ್ರಾದೇಶಿಕ ವೈದ್ಯಕೀಯ ಕೇಂದ್ರಗಳ ಸ್ಥಾಪನೆ, ಗ್ರಾಮೀಣ ಮಹಿಳೆಯರಿಗಾಗಿ ಶಿ-ಮಾರ್ಟ್, ಜವಳಿ ಮತ್ತು ರಾಸಾಯನಿಕ ಪಾರ್ಕ್, ಸರಕು ಸಾಗಣೆ ಕಾರಿಡಾರ್, ಜಲ ಮಾರ್ಗ, ಹೈ ಸ್ಪೀಡ್ ರೈಲ್ವೇ ಯೋಜನೆ, ಖೇಲೋ ಇಂಡಿಯಾ ಮಿಷನ್ ಮುಂತಾದ ಯೋಜನೆಗಳ ಮೂಲಕ ಕೃಷಿ, ವೈದ್ಯಕೀಯ, ಕ್ರೀಡೆ, ಕೌಶಲ್ಯಾಧಾರಿತ ಉದ್ಯೋಗಗಳು, ಜಾಗತಿಕ ಮಾರುಕಟ್ಟೆ ಮತ್ತು ವಿದೇಶಿ ವ್ಯಾಪಾರಗಳಿಗೆ ಉತ್ತೇಜನ ನೀಡಲಾಗಿದೆ.


ಆತ್ಮನಿರ್ಭರ ಭಾರತ, ಶಕ್ತಿ ಯೋಜನೆಗಳ ಮೂಲಕ ಸಮಗ್ರ ಭಾರತದ ಅಭಿವೃದ್ಧಿಗೆ ಪಣತೊಟ್ಟ ಯುವಶಕ್ತಿ ಪ್ರೇರಿತ, ಸ್ವಾವಲಂಬಿ ಭಾರತದ ಧ್ಯೇಯವುಳ್ಳ ಬಜೆಟ್ ಇದಾಗಿದ್ದು, ವಿಕಸಿತ ಭಾರತದ ಸಂಕಲ್ಪ  ಹೊಂದಿದೆ ಎಂದು ನಾಯಕ್ ತಿಳಿಸಿದ್ದಾರೆ.