ಮಾ.1: ಮರಾಟಿ ಹೋಳಿ ಸಂಭ್ರಮ

ಲೋಕಬಂಧು ನ್ಯೂಸ್, ಉಡುಪಿ
ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾಸಂಘ ಕುಂಜಿಬೆಟ್ಟು ನೇತೃತ್ವದಲ್ಲಿ ಮರಾಟಿ ಹೋಳಿ ಸಂಭ್ರಮ ಮಾ.1ರಂದು ಬ್ರಹ್ಮಾವರ ಬಳಿಯ ಚೇರ್ಕಾಡಿ ಗ್ರಾಮದ ಮುಂಡ್ಕಿನಜೆಡ್ಡು ಆರ್.ಕೆ ಪಾಟ್ಕರ್ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇವಾಸಂಘದ ಉಡುಪಿ ಜಿಲ್ಲಾ ಸಂಚಾಲಕ ಉಮೇಶ್ ನಾಯ್ಕ್ ಚೇರ್ಕಾಡಿ ತಿಳಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಡುಪಿ ಜಿಲ್ಲೆಯ ಸುಮಾರು 136 ಹತ್ತರಕಟ್ಟೆ (ಹತ್ತು ಸಮಸ್ತರ ಕಟ್ಟೆ)ಗಳ 3 ಸಾವಿರಕ್ಕೂ ಅಧಿಕ ಮಂದಿ ಹೋಳಿ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ. ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.


ಈವರೆಗೆ ಉಡುಪಿ ಜಿಲ್ಲೆಯ 136 ಹತ್ತರಕಟ್ಟೆಯ ಮಂದಿ ಅವರವರ ಗ್ರಾಮಗಳಲ್ಲಿ ಹೋಳಿ ಸಂಭ್ರಮ ಆಚರಿಸುತ್ತಿದ್ದರು. ಆದರೆ, ಈ ಬಾರಿ ಮೊದಲ ಬಾರಿಗೆ ಎಲ್ಲರೂ ಒಗ್ಗಟ್ಟಾಗಿ ಹೋಳಿ ಸಂಭ್ರಮಾಚರಣೆಯಲ್ಲಿ ತೊಡಗುತ್ತಿದ್ದಾರೆ. ಮರಾಟಿ ಸಮಾಜದ ಜಾನಪದ ಕಲೆಯನ್ನು ಇನ್ನಷ್ಟು ಪ್ರಚುರಪಡಿಸುವ ಆಶಯದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿ ಎಚ್.ರಾಜೇಶ್ ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾಸಂಘದ ಅಧ್ಯಕ್ಷ ಕೆ.ಟಿ.ನಾಯ್ಕ್ ಚಾಂತಾರು ಅಧ್ಯಕ್ಷತೆ ವಹಿಸುವರು ಎಂದರು.


ಸುದ್ದಿಗೋಷ್ಟಿಯಲ್ಲಿ ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾಸಂಘ ಅಧ್ಯಕ್ಷ ಕೆ.ಟಿ.ನಾಯ್ಕ್ ಚಾಂತಾರು, ವೆಂಕಟೇಶ್ ನಾಯ್ಕ್, ನಾರಾಯಣ ನಾಯ್ಕ್ ಮೊದಲಾದವರಿದ್ದರು.