ಫೆ.19-21: ಮುನಿಯಾಲು ಏಕಪವಿತ್ರ ಶ್ರೀಮನ್ನಾಗಮಂಡಲ- ರೈತಪೀಠ ಪ್ರಶಸ್ತಿ

ಹೆಬ್ರಿ | ಲೋಕಬಂಧು ನ್ಯೂಸ್
ರೈತರು ಕಾರ್ಪೊರೇಟ್ ಸ್ಟಾಂಡರ್ಡ್'ನಲ್ಲಿ ಬದುಕು ಬಾಳಬೇಕು. ರೈತರ ತ್ಯಾಗವನ್ನು ಗುರುತಿಸುವ ಉದ್ದೇಶದಿಂದ ರೈತಪೀಠ ಪ್ರಶಸ್ತಿ ಸ್ಥಾಪಿಸಲಾಗಿದೆ. ನಾಗಮಂಡಲದ ಮೂಲಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಆ ಮೂಲಕ ರೈತ ಸಮುದಾಯಕ್ಕೆ ವಿಶೇಷ ಮನ್ನಣೆ ನೀಡುವುದು ನಮ್ಮ ಮುಖ್ಯ ಉದ್ದೇಶ. ದೇಸಿ ಗೋವಿನ ತಳಿಗಳ ಅಭಿವೃದ್ಧಿ, ಸುಧಾರಿತ ಟೆಕ್ನಾಲಜಿ ಬಳಕೆ, ಯುವಜನರನ್ನು ಕೃಷಿಯತ್ತ ಒಲವು ಮೂಡಿಸುವ ಪ್ರಮುಖ ಉದ್ದೇಶದಿಂದ ನಾಗಮಂಡಲ ಮಾಡುತ್ತಿರುವುದಾಗಿ ಮುನಿಯಾಲು ಸಂಜೀವಿನಿ ಫಾರ್ಮ್‌ ಗೋಧಾಮ ಪ್ರವರ್ತಕ ಡಾ.ಜಿ. ರಾಮಕೃಷ್ಣ ಆಚಾರ್ ಹೇಳಿದರು. 
ಮುನಿಯಾಲು ಸಂಜೀವಿನಿ ಗೋಧಾಮದ ನಾಗಬನದಲ್ಲಿ ಫೆ 19ರಿಂದ 21ರ ವರೆಗೆ ನಡೆಯಲಿರುವ ಏಕಪವಿತ್ರ ಶ್ರೀಮನ್ನಾಗಮಂಡಲ ಕುರಿತ ಸುದ್ದಿಗೋಷ್ಟಿಯಲ್ಲಿ  ಮಾತನಾಡಿದರು. ಸವಿತಾ ಆರ್‌ ಆಚಾರ್‌ ಮತ್ತು ರಕ್ಷಿತ್ ಆಚಾರ್ ಇದ್ದರು.


ಮುನಿಯಾಲು ಶ್ರೀಮನ್ನಾಗಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿ, ಕೈಗಾರಿಕೋದ್ಯಮಿ ಜಿ. ರಾಮಕೃಷ್ಣ ಆಚಾರ್ ಅವರು ರೈತನಿಗೆ ವಿಶೇಷ ಗೌರವ ಸಿಗಬೇಕು ಹಾಗೂ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂಬ ಆಶಯದಿಂದ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಅವರ ಕನಸಿನ ರೈತಪೀಠ ಪ್ರಶಸ್ತಿಯನ್ನು ನಾಗಮಂಡಲದ ಮೂಲಕ ನೀಡಲು ಹೊರಟಿರುವುದು ಮಾದರಿ ಕಾರ್ಯ ಎಂದರು.


ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು ಮಾತನಾಡಿ, ನಾಗಮಂಡಲದಲ್ಲಿ  ಪ್ರಸಾದ ರೂಪದಲ್ಲಿ ಗಿಡ ಹಾಗೂ ಬೀಜದುಂಡೆ ನೀಡುವ ಯೋಚನೆ ಅತ್ಯಂತ ಶ್ರೇಷ್ಠ ಕಾರ್ಯ, ಯಾವುದೇ ಆಡಂಬರವಿಲ್ಲದೆ ರೈತರು, ವಿದ್ಯಾರ್ಥಿಗಳು, ಯುವಜನರನ್ನು ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವಂತೆ ಪುಣ್ಯತಮವಾದ ನಾಗಮಂಡಲ ಕಾರ್ಯ ನಡೆಯಲಿದೆ ಎಂದರು.


ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ, ವಾಸುದೇವ ಭಟ್ ಸಹಯೋಗದೊಂದಿಗೆ ಪಾತ್ರಿಗಳಾದ ರಾಮಚಂದ್ರ ಕುಂಜಿತ್ತಾಯ ಹಾಗೂ ಗೋಳಿಯಂಗಡಿ ಸುಬ್ರಹ್ಮಣ್ಯ ವೈದ್ಯ ಅವರ ಮೇಳದೊಂದಿಗೆ  ನಾಗಮಂಡಲ ನಡೆಯಲಿದೆ.


ಫೆ.19ರಂದು ಗುರುವಾರ ಋತಿಜರ ಸ್ವಾಗತ, ಋತಿಗ್ವರಣ, ಫಲನ್ಯಾಸ- ಪ್ರಾರ್ಥನೆ, ಆದ್ಯಶುದ್ಧಿ- ಪುಣ್ಯಾಹ, ಮಾತೃಕಾಪೂಜನಮ್, ನಾಂದೀಸಮಾರಾಧನ್, ಸಪ್ತರ್ಷಿ ಪೂಜನಮ್, ಅರಣಿಮಥನ, ಬ್ರಹ್ಮಕೂರ್ಚ ಹೋಮ, ಆರು ಕಾಯಿ ಗಣಯಾಗ, ನವಗ್ರಹ ಯಾಗ, ಪ್ರತಿಸರಬಂಧಪೂರ್ವಕ ಕಂಕಣಬಂಧನ, ಶ್ರೀಮದ್ಭಾಗವತ ಪಾರಾಯಣ ಆರಂಭ, ಉಗ್ರಾಣ ಮುಹೂರ್ತ, ಅನ್ನಾರಾಧನ ಉಗ್ರಾಣ ಮುಹೂರ್ತ, ಅಂಕುರ ಪೂಜೆ, ಸಪ್ತಶುದ್ಧಿ, ಭೂ ಶುದ್ಧಿ, ವಾಸ್ತು ವಿದ್ಯಾಕಲಾಪ, ರಾಕ್ಷೋಘ್ನಸೂಕ್ತ ಯಾಗ, ಪ್ರಾಕಾರ ಬಲಿ ನಡೆಯಲಿದೆ.


ಫೆ.20ರ ಶುಕ್ರವಾರ ಮೃತ್ಯುಂಜಯ ಹೋಮ, ಕೂಷ್ಮಾಂಡಯಾಗ, ಭೂತನಾಥ ಪ್ರೀತಿಕರ ಪ್ರತ್ಯಕ್ಷ ಅಶ್ವಪೂಜಾ, ಪ್ರಸನ್ನಪೂಜೆ, ಸಾನ್ನಿಧ್ಯಾರ್ಥ ನೂರುಂಪಾಲುಮ್, ಚಕ್ರಾಬ್ಜಮಂಡಲಪೂಜಾ, ಭದ್ರಕಮಂಡಲ ಪೂಜೆ ನಡೆಯಲಿದೆ.


ಫೆ. 21ರ ಶನಿವಾರ  ಆಶ್ಲೇಷಾ ಬಲಿದಾನ, ಪಂಚವಿಂಶತಿ ದ್ರವ್ಯಮಿಲಿತ ಕಲಶ, ಪ್ರಧಾನಯಾಗ, ಸರ್ಪತ್ರಯಮಂತ್ರ ಯಾಗ, ಪವಮಾನ ಸೂಕ್ತಯಾಗ, ತಿಲಯಾಗ,  ಬ್ರಹ್ಮಚಾರಿ ಆರಾಧನೆ, ಪ್ರಸನ್ನ ಪೂಜೆ, ಪಲ್ಲಪೂಜೆ, ಅನ್ನರಾಧನೆ, ದುರ್ಗಾ ನಮಸ್ಕಾರ, ಹಾಲಿಟ್ಟು ಸೇವೆ, ಏಕಪವಿತ್ರ ಶ್ರೀಮನ್ನಾನಾಗಮಂಡಲ ಸೇವೆ, ಅನುಗ್ರಹ ವಾಕ್ಯಪ್ರದಾನ, ಪ್ರಸಾದ ವಿತರಣೆ, ಪ್ರಸನ್ನ -ಉತ್ತರಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ.


ನಾಗಮಂಡಲದಲ್ಲಿ ಕೃಷಿ ಮಂಡಲ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ನಡೆಯುವ ನಾಗಮಂಡಲದಲ್ಲಿ ಕೃಷಿ ಬಗ್ಗೆ ವಿಚಾರಗೋಷ್ಟಿ 'ಕೃಷಿ ಮಂಡಲ' ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಉದ್ಘಾಟಿಸುವರು. ಶ್ರೀಕಾಂತ ಶೆಟ್ಟಿ ಕಾರ್ಕಳ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು,
 ಬೆಳಗ್ಗೆ 11 ಗಂಟೆಗೆ ನಡೆಯುವ ಮೊದಲ ಕೃಷಿ ವಿಚಾರಗೋಷ್ಠಿಯಲ್ಲಿ 'ಕರಾವಳಿ ಕೃಷಿ ಬಹುತ್ವ ಮತ್ತು ಧಾರ್ಮಿಕ ನಂಬಿಕೆಗಳು' ವಿಷಯ ಬಗ್ಗೆ ನಿವೃತ್ತ ಪ್ರಾಧ್ಯಾಪಕ ಮತ್ತು ಕೃಷಿ ಅಂಕಣಕಾರ ಡಾ.ನರೇಂದ್ರ ರೈ ದೇರ್ಲ ವಿಚಾರ ಮಂಡಿಸುವರು


'ಯುವಜನತೆ ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆಗಳ ಬಗ್ಗೆ' ಪುತ್ತೂರು ಗ್ರಾಮಜನ್ಯದ ನಿರಂಜನ ಪೊಳ್ಯ ಮಾತನಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಹಾಗೂ ಪ್ರಗತಿಪರ ಕೃಷಿಕ ಗುಣಪಾಲ ಕಡಂಬ ಅಧ್ಯಕ್ಷತೆ ವಹಿಸಲಿದ್ದಾರೆ.


ಅಪರಾಹ್ನ 2.30ರಿಂದ ನಡೆಯುವ ಕೃಷಿಗೋಷ್ಟಿಯಲ್ಲಿ 'ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸಾತಿಯ ಅನುಭವ' ಬಗ್ಗೆ ಕುರುಡಪದವು ಮೈರುಗದ ಪ್ರಯೋಗಶೀಲ ಕೃಷಿಕ  ಪ್ರವೀಣ್ ಕೇಶವ್ ಮಾತನಾಡಲಿದ್ದಾರೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಧನಂಜಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಹ್ನ 3.30ರಿಂದ ಬಡಗುತ್ತಿಟ್ಟಿನ ಖ್ಯಾತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಹಾಗೂ ತೆಂಕುತಿಟ್ಟಿನ ಖ್ಯಾತ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಬಳಗದಿಂದ ಯಕ್ಷಗಾನವಲ್ಲರಿ ಕಾರ್ಯಕ್ರಮ ನಡೆಯಲಿದೆ.