ಮಗು ಕೇಂದ್ರಿತ ಶಿಕ್ಷಣ ಕ್ರಮದಲ್ಲಿ ಬೋಧಿಸಿ

ಉಡುಪಿ | ಲೋಕಬಂಧು ನ್ಯೂಸ್
ಮಗು ಕೇಂದ್ರಿತ ಶಿಕ್ಷಣ ಬೋಧನಾ ಕ್ರಮ ರೂಢಿಗೆ ಬರಬೇಕು ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಪ್ರತಿಪಾದಿಸಿದರು.
ಡಾ.ಎ.ವಿ.ಬಾಳಿಗ ಆಸ್ಪತ್ರೆ ಉಡುಪಿ, ಕಮಲ್ ಬಾಳಿಗ ಚಾರಿಟೆಬಲ್ ಟ್ರಸ್ಟ್ ಮುಂಬೈ ಆಶ್ರಯದಲ್ಲಿ ರೋಟರಿ ಮಣಿಪಾಲ, ಐಎಂಎ ಉಡುಪಿ- ಕರಾವಳಿ ಹಾಗೂ ಯಕ್ಷಗಾನ ಕಲಾರಂಗ ಸಂಯುಕ್ತಾಶ್ರಯದಲ್ಲಿ `ಪೋಷಕರ ಮದ್ಯವ್ಯಸನ ಹಾಗೂ ಮಕ್ಕಳು' ಜಾಗೃತಿ ಸಪ್ತಾಹ ಅಂಗವಾಗಿ ಭಾನುವಾರ ನಗರದ ಕುಂಜಿಬೆಟ್ಟು ಐವೈಸಿ ಯಕ್ಷಗಾನ ಕಲಾರಂಗ ಸಭಾಂಗಣದಲ್ಲಿ ` 'ಮಾನವೀಯ ಶಿಕ್ಷಣ- ವಿಶ್ವಶಾಂತಿಗೆ ಅಡಿಪಾಯ' ಶೀರ್ಷಿಕೆಯಡಿ ನಡೆದ `ಕರ್ಜಗಿಯವರೊಂದಿಗೆ ಮಾತುಕತೆ' ಕಾರ್ಯಕ್ರಮದಲ್ಲಿ ಮಾತನಾಡಿದರು.


ತಾಯಿ ಮಗುವಿನ ಕೈಹಿಡಿದು ಮುನ್ನಡೆಸುವಂತೆ ಶಿಕ್ಷಕರು ವಿದ್ಯಾರ್ಥಿಗಳ ಮಟ್ಟಕ್ಕೆ ತಲುಪಿ ಬೋಧಿಸಬೇಕು. ತಮ್ಮ ಮಕ್ಕಳೆಂಬ ಭಾವನೆಯಿಂದ ಜಾತಿ ಧರ್ಮ ಲಿಂಗ ಭೇದ ಮರೆತು ವರ್ತಿಸಬೇಕು. ಮಕ್ಕಳ ಕಲಿಕೆಗೆ ಪೂರಕವಾದ ವಿಷಯಗಳನ್ನು ಬೋಧಿಸಬೇಕು.


ಜೀವನ ಮೌಲ್ಯಗಳನ್ನು ತರಗತಿಯಲ್ಲಿ ಕಲಿಸುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ತಾವು ಮೊದಲಾಗಿ ಮೌಲ್ಯಗಳನ್ನು ನಡೆದು ತೊರಿಸಿದಲ್ಲಿ ಮುಂದೆ ಮಕ್ಕಳು ಅಳವಡಿಸಿಕೊಂಡು ಗೌರವಿಸುತ್ತಾರೆ ಎಂದು ಡಾ.ಕರ್ಜಗಿ ಸೋದಾಹರಣವಾಗಿ ವಿವರಿಸಿದರು.


ಶಿಕ್ಷಕರು ಓದಿಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಬೋಧಿಸುವ ವಿಷಯಗಳನ್ನು ಮೊದಲಾಗಿ ಮನನ ಮಾಡಿಕೊಳ್ಳಬೇಕು. ಕೊಠಡಿ ವಾತಾವರಣ ನಿರ್ಮಾಣ ಶಿಕ್ಷಕರಿಂದಲೇ ಆಗುವುದರಿಂದ ಧನಾತ್ಮಕ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ಅವರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಬೇಕು. ಮಕ್ಕಳನ್ನು ಕೀಳಾಗಿ ಕಾಣದೇ, ಅವರನ್ನು ಯಾವುದೇ ಲೇಬಲ್ ಮಾಡದೇ ಪಾಠದೊಂದಿಗೆ ಮೌಲ್ಯ ಬೋಧಿಸಿದಾಗ ವಿಶ್ವಶಾಂತಿ ನೆಲೆಗೊಳ್ಳಲು ಸಾಧ್ಯ. ಶಿಕ್ಷಕರಿಂದ ಈ ಕಾರ್ಯ ನಡೆಯಬೇಕಾಗಿದೆ ಎಂದರು.


ಜಾತಿ ಧರ್ಮಗಳನ್ನು ತಮ್ಮ ಮನೆಗಳಿಗೆ ಸೀಮಿತೊಳಿಸಿ, ಭಾರತೀಯತೆಯ ವಿಶಾಲಭಾವ ತಳೆಯುವುದು ಇಂದಿನ ಅಗತ್ಯ ಎಂದು ಡಾ.ಕರ್ಜಗಿ ಪ್ರತಿಪಾದಿಸಿದರು.


ಡಯಟ್ ಪ್ರಾಂಶುಪಾಲ ಡಾ.ಅಶೋಕ ಕಾಮತ್, ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್, ರೋಟರಿ ಗವರ್ನರ್ ಅಮಿತ್ ಅರವಿಂದ್, ಕಂಪ್ಯೂಟರ್ ಕೀಲಿಮಣೆ ತಜ್ಞ ಪ್ರೊ. ಕೆ.ಪಿ. ರಾವ್, ಐಎಂಎ ಅಧ್ಯಕ್ಷ ಡಾ. ಅಶೋಕ ಕುಮಾರ್ ಅಭ್ಯಾಗತರಾಗಿದ್ದರು.


ಮಣಿಪಾಲ ರೋಟರಿ ಅಧ್ಯಕ್ಷೆ ಶಶಿಕಲಾ ರಾಜವರ್ಮ ಸ್ವಾಗತಿಸಿದರು. ಮನೋವೈದ್ಯ ಡಾ.ವಿರೂಪಾಕ್ಷ ದೇವರಮನಿ ಪ್ರಸ್ತಾವನೆಗೈದರು. ರಶ್ಮಿ ಹಾಗೂ ಸಿಂಧುಶ್ರೀ ನಿರೂಪಿಸಿದರು.


ಈ ಸಂದರ್ಭದಲ್ಲಿ ಡಯಟ್ ವತಿಯಿಂದ ಶಿಕ್ಷಕರಿಗಾಗಿ ಆಯೋಜಿಸಲಾದ ಪೋಷಕರ ಮದ್ಯಪಾನ ಮಕ್ಕಳ ಮೇಲೆ ದುಷ್ಪರಿಣಾಮ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಮಾಣಪತ್ರ ನೀಡಲಾಯಿತು.


`ಪೋಷಕರ ಮದ್ಯ ವ್ಯಸನದಿಂದ ಅವರ ಮಕ್ಕಳು ಅನುಭವಿಸುವ ಯಾತನೆ' ಕಿರುಪ್ರಹಸನ ಮಣಿಪಾಲದ ಮುನಿಯಾಲು ಆಯುರ್ವೇದ ವಿದ್ಯಾರ್ಥಿಗಳಿಂದ ಪ್ರಸ್ತುತಿಗೊಂಡಿತು.


ಇದೇ ಸಂದರ್ಭದಲ್ಲಿ ಡಾ. ಗುರುರಾಜ ಕರ್ಜಗಿ ಅವರ `ಸಾಕ್ಷಿ' ಹಾಗೂ ವಿರೂಪಾಕ್ಷ ದೇವರಮನಿ ಅವರ `ಕಲಿಸುವ ಗುರುವೇ ಕಲಿಸು' ಪುಸ್ತಕ ಅನಾವರಣಗೊಳಿಸಲಾಯಿತು.