ತುಳುನಾಡಿನ ವಿಶಿಷ್ಟ ಆಚರಣೆ ಕೆಡ್ಡೆಸ
ಸಮಸ್ತ ಜೀವಿಗಳನ್ನು ಹೊತ್ತು ಪೊರೆವ ಭೂಮಿ ತಾಯಿಗೆ ಸಮಾನ. ಭೂದೇವಿ ಭೂತಾಯಿಯೂ ಆಗಿದ್ದಾಳೆ. ಆಕೆಯನ್ನು ಮಾನವ ಸಹಜ ಗುಣಗಳಿಂದ ಗುರುತಿಸಿ ಅನುಸರಿಸುವುದು ಸನಾತನ ಹಿಂದೂ ಧರ್ಮದ ಹೆಗ್ಗಳಿಕೆ.
ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ | ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ||
ಸಮುದ್ರವನ್ನು ವಸ್ತ್ರವಾಗಿ ಧರಿಸಿರುವ, ಪರ್ವತಗಳನ್ನು ಸ್ತನಗಳಂತೆ ಹೊಂದಿರುವ, ವಿಷ್ಣುವಿನ ಪತ್ನಿಯಾದ ಭೂದೇವಿ, ನಿನಗೆ ನಮಸ್ಕಾರ. ನಿನ್ನ ಮೇಲೆ ಕಾಲಿಟ್ಟು ನಡೆಯುವ ನನ್ನ ತಪ್ಪನ್ನು ಕ್ಷಮಿಸು ಎಂಬುದಾಗಿ ಬೆಳಗ್ಗೆ ಭೂಮಿಗೆ ಕಾಲಿಡುವ ಮುನ್ನ ಸ್ಮರಿಸಲಾಗುತ್ತದೆ. ಭೂಮಿಯ ಮೇಲಿನ ಗೌರವ, ಕೃತಜ್ಞತೆ ಮತ್ತು ವಿನಯವನ್ನು ಇದು ಧ್ವನಿಸುತ್ತದೆ.
ಭೂಮಿತಾಯಿಗೆ ಪ್ರಾಮುಖ್ಯತೆ ನೀಡಿ ತುಳುನಾಡಿನಲ್ಲಿ ಆಚರಿಸುವ ಕೆಡ್ಡಸ ಅಥವಾ ಕೆಡ್ಡೆಸ ತುಳುನಾಡಿನ ಅತ್ಯಂತ ಪ್ರಮುಖ, ಮೂರು- ನಾಲ್ಕು ದಿನಗಳ ಕಾಲ ಆಚರಿಸುವ ಒಂದು ವಿಶಿಷ್ಟ ಭೂಮಿಪೂಜೆಯ ಹಬ್ಬ.
ಸಾಮಾನ್ಯವಾಗಿ ಇದು ಫೆಬ್ರವರಿ ತಿಂಗಳಲ್ಲಿ ಆಚರಿಸಲ್ಪಡುತ್ತದೆ. ಭೂಮಿ ತಾಯಿ ಋತುಮತಿಯಾಗುವ (ಮುಟ್ಟಾಗುವ) ದಿನ ಎಂದು ನಂಬಿ, ಆ ಸಮಯದಲ್ಲಿ ಭೂಮಿಯನ್ನು ಉಳದೆ, ಪ್ರಕೃತಿಗೆ ಹಾನಿ ಮಾಡದೆ, ಭೂದೇವಿಯನ್ನು ಮಡಿಗೊಳಿಸಿ ಆರಾಧಿಸುವ ಆಚರಣೆಯಾಗಿದೆ.
ಕೆಡ್ಡಸ ಆಚರಣೆ ಹಿನ್ನೆಲೆ
ಭೂಮಿ ತಾಯಿಯನ್ನು ಹೆಣ್ಣಿನಂತೆ ಭಾವಿಸಿ, ಋತುಮತಿಯಾದಾಗ ಆಕೆಗೆ ವಿಶ್ರಾಂತಿ ನೀಡಿ, ನಂತರ ಫಲವತ್ತಾಗುವಂತೆ ಮಾಡುವ ನಂಬಿಕೆ. ಅದನ್ನು ಸಾಮಾನ್ಯವಾಗಿ ಮೂರು ದಿನ ಆಚರಿಸಲಾಗುತ್ತದೆ. ಮೊದಲ ದಿನ ಭೂಮಿ ಶುದ್ಧೀಕರಣ. ಎರಡನೆಯ ದಿನ ನಡು ಕೆಡ್ಡಸ. ಬೇಟೆಯಾಡುವ ಸಂಪ್ರದಾಯ, ವಿಶೇಷ ಆಹಾರ ಸೇವನೆ. ಮೂರನೆಯ ದಿನ ಭೂದೇವಿಗೆ ಸ್ನಾನ ವಿಧಿ.
ವಿಶೇಷ ಆಹಾರ
ಅಕ್ಕಿ, ಹುರುಳಿ, ಕೊಬ್ಬರಿ, ಬೆಲ್ಲ, ತುಪ್ಪ ಮಿಶ್ರಿತ 'ನೆನ್ನೆರಿ' (ಕುಡುಅರಿ) ಕೆಡ್ಡಸದ ವಿಶೇಷ ಆಹಾರ.
ಈ ಮೂರು ದಿನಗಳ ಕಾಲ ಭೂಮಿಯನ್ನು ಅಗೆಯುವುದು, ಮರ ಕಡಿಯುವುದು ಅಥವಾ ಪ್ರಕೃತಿಗೆ ಹಾನಿ ಮಾಡುವುದು ನಿಷಿದ್ಧ. ಕೆಡ್ಡಸದ ಗಾಳಿ (ಬೆಪ್ಪು ಗಾಳಿ) ಬೀಸುವ ಈ ಸಮಯದಲ್ಲಿ ಮುಂದಿನ ಬೆಳೆಗಾಗಿ ಭೂಮಿಯನ್ನು ಸಿದ್ಧಪಡಿಸಲಾಗುತ್ತದೆ.
ಈ ಹಬ್ಬ ತುಳುನಾಡಿನ ಕೃಷಿ ಸಂಸ್ಕೃತಿ ಮತ್ತು ಪರಿಸರ ಕಾಳಜಿಯನ್ನು ಎತ್ತಿಹಿಡಿಯುತ್ತದೆ.
