ಕಾರು ಪಲ್ಟಿ: ಆರು ಮಂದಿಗೆ ಗಾಯ

ಕುಂದಾಪುರ | ಲೋಕಬಂಧು ನ್ಯೂಸ್
ತೆಕ್ಕಟ್ಟೆ ಸಮೀಪದ ಕನ್ನುಕೆರೆ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸೋಮವಾರ ಮಧ್ಯಾಹ್ನ ಫಾರ್ಚುನರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಪಲ್ಟಿಯಾದ ಘಟನೆ ನಡೆದಿದೆ.
ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.


ಗಾಯಗೊಂಡವರು ಮಹಾರಾಷ್ಟ್ರದ ಪುಣೆಯ ಕಾನೂನು ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಒಟ್ಟು 12 ಮಂದಿ ವಿದ್ಯಾರ್ಥಿಗಳು ಎರಡು ಕಾರುಗಳಲ್ಲಿ ದೇಶ ಸುತ್ತುವ ಪ್ರವಾಸಕ್ಕೆ ಹೊರಟಿದ್ದು, ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪುಣೆಗೆ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.


ಸೋಮವಾರ ಮಧ್ಯಾಹ್ನ ತೆಕ್ಕಟ್ಟೆ ಸಮೀಪದ ಕನ್ನುಕೆರೆ ಪ್ರದೇಶದಲ್ಲಿ ಕಾರು ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಹಾರಿ ವಿರುದ್ಧ ದಿಕ್ಕಿನ ರಸ್ತೆಯ ಚರಂಡಿಗೆ ಕಾರು ಪಲ್ಟಿಯಾಗಿದೆ. ಅಪಘಾತದ ವೇಳೆಗೆ ಕಾರಿನಲ್ಲಿ ಚಾಲಕ ಸೇರಿದಂತೆ ಆರು ಮಂದಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಅಪಘಾತದ ಪರಿಣಾಮ ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಘಟನೆ ನಡೆದ ಕೂಡಲೇ ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ.


ಪ್ರಾಥಮಿಕ ತನಿಖೆ ಪ್ರಕಾರ ಅಪಘಾತಕ್ಕೆ ಚಾಲಕನ ಅತೀವೇಗ ಹಾಗೂ ಪಾನಮತ್ತತೆ ಮತ್ತು ಅಜಾಗರೂಕ ಚಾಲನೆ ಕಾರಣ ಎಂದು ಶಂಕಿಸಲಾಗಿದೆ.