ಉಡುಪಿ | ಲೋಕಬಂಧು ನ್ಯೂಸ್
ನಗರದ ಹಳೆ ಸರಕಾರಿ ಬಸ್ಸು ನಿಲ್ದಾಣ ಬಳಿಯ ವಸತಿಗೃಹದಲ್ಲಿ ಯಾತ್ರಿಯೊಬ್ಬರು ಕುಳಿತ ಕುರ್ಚಿಯಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ವ್ಯಕ್ತಿ ಕೊಠಡಿಯಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ಲಾಡ್ಜ್'ನ ಸಿಬ್ಬಂದಿ ಸಂಶಯಪಟ್ಟು ಬಾಗಿಲು ತೆರೆದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ.
ಮೃತ ವ್ಯಕ್ತಿಯನ್ನು ದಾವಣಗೆರೆ ನಿವಾಸಿ ಮಹಾಂತೇಶ ಎಂ.ಜಿ. ಎಂದು ಗುರುತಿಸಲಾಗಿದೆ. ಅವರು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಬಂದಿದ್ದರೆಂದು ತಿಳಿದುಬಂದಿದೆ.
ನಗರ ಪೋಲಿಸ್ ಠಾಣೆಯ ಎಸ್ಐ ನಾರಾಯಣ, ಎಎಸ್ಐ ಹರೀಶ್, ಹೆಡ್ ಕಾನ್ಸ್‌ಟೇಬಲ್ ಆಶಾಲತಾ ಕಾನೂನು ಪ್ರಕ್ರಿಯೆಯನ್ನು ಮೃತನ ಹೆಂಡತಿ ಹಾಗೂ ಅಣ್ಣನ ಸಮಕ್ಷಮ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.
ಸಾವಿಗೆ ಸ್ವಷ್ಟ ಕಾರಣ ತಿಳಿದುಬಂದಿಲ್ಲ. ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.