ಲೋಕಬಂಧು ನ್ಯೂಸ್, ಉಡುಪಿ
ಯುವವಾಹಿನಿ ಉಡುಪಿ ಘಟಕದ ರಜತ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ. 28ರಂದು ಉಡುಪಿ ಜಿಲ್ಲೆಯ ಬಿಲ್ಲವ ಸಂಘಗಳಿಗೆ ಸಾಂಸ್ಕೃತಿಕ ಸ್ಪರ್ಧೆ 'ಯುವ ಸಂಗಮ' ಬನ್ನಂಜೆ ನಾರಾಯಣ ಗುರು ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಯುವವಾಹಿನಿ ಘಟಕದ ಅಧ್ಯಕ್ಷ ದಯಾನಂದ ಕರ್ಕೇರ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆ.28ರಂದು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಕಾರ್ಯಕ್ರಮ ಉದ್ಘಾಟಿಸುವರು. ಸ್ಪರ್ಧೆಯಲ್ಲಿ 10 ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿವೆ.
ಮಾ.1ರಂದು ಯುವ ಸದ್ಭಾವನಾ ಯುವ ಬಿಲ್ಲವ ಸಮಾವೇಶ ನಡೆಯಲಿದ್ದು, ನಗರಾಭಿವೃದ್ಧಿ ಕಾರ್ಯದರ್ಶಿ ಎಚ್.ಕೆ ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉದ್ಯಮ ಕ್ಷೇತ್ರದ ಸಾಧಕ ರಾಮಚಂದ್ರ ಮಾಬಿಯಾನ್, ಪ್ರಕಾಶ್ ಕರ್ಕೇರ, ಪ್ರಭಾಕರ ಪೂಜಾರಿ, ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಡಾ. ಸುನಿತಾ ಅವರಿಗೆ ರಜತ ರತ್ನ ಪ್ರಶಸ್ತಿಯೊಂದಿಗೆ ಗೌರವಾರ್ಪಣೆ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ರಜತ ಸಂಭ್ರಮ ಸಂಚಾಲಕ ರಘುನಾಥ್ ಮಾಬಿಯಾನ್, ಸಂತೋಷ್ ಕುಮಾರ್, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪ ಮಹಾಪ್ರಬಂಧಕ ಪ್ರವೀಣ್ ಕುಮಾರ್, ನಾರಾಯಣ ಬಿ.ಎಸ್. ಮೊದಲಾದವರಿದ್ದರು.