ಫೆ.28ರಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಳ ಪ್ರತಿಷ್ಠಾ ವರ್ಧಂತಿ

ಲೋಕಬಂಧು ನ್ಯೂಸ್, ಕಾಪು
ಇಲ್ಲಿನ ಶ್ರೀ ಹೊಸ‌ಮಾರಿಗುಡಿ ದೇವಸ್ಥಾನದ ಉಚ್ಚಂಗಿ ಸಹಿತ  ಶ್ರೀ ಮಾರಿಯಮ್ಮ ದೇವಿಯ ದಿವ್ಯ ಸಾನಿಧ್ಯದಲ್ಲಿ ಪ್ರಥಮ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಕ್ಷೇತ್ರದ ಪ್ರಧಾನ ತಂತ್ರಿ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ ಕುಮಾರಗುರು ತಂತ್ರಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಹಾಗೂ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಸಹಭಾಗಿತ್ವದಲ್ಲಿ, ಸಹಸ್ರ ಸಹಸ್ರ ಸಂಖ್ಯೆಯ ಭಕ್ತಾದಿಗಳ ಕ್ಷೇತ್ರ ಸಂದರ್ಶನದ ನಿರೀಕ್ಷೆಯಲ್ಲಿ ಮಾತೃ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ ತಿಳಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಫೆ. 28ರಂದು ಬೆಳಿಗ್ಗೆ 8.30ರಿಂದ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಆರಣಿಮಥನ, 6 ಕಾಯಿ ಗಣಯಾಗ, ನವಗ್ರಹ ಹೋಮ, ಮೃತ್ಯುಪಂಚಕ ಪೂಜೆ, ಶ್ರೀ ಚಂಡೀಪುರಶ್ಚರಣಮ್, ಸಂಜೆ 6ರಿಂದ ವಾಸ್ತುಹೋಮ, ವಾಸ್ತು ಪೂಜೆ, ಸುದರ್ಶನ ರಕ್ಷಾಪಕ್ರಿಯೆ ಪೂಜೆಗಳು ನಡೆಯಲಿದೆ.


ಮಾ.1ರಂದು ಬೆಳಿಗ್ಗೆ ಗಂಟೆ 8ರಿಂದ ಶ್ರೀಸಪ್ತಮಾತೃಕಾ ಕಲ್ಪಮಹಾಯಾಗದೊಂದಿಗೆ  ಸಪ್ತಮಾತೃಕಾ ಬಲಿದಾನಮ್ ಹಾಗೂ ಮಹಾಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ.


ಸಂಜೆ 6ರಿಂದ ವನದುರ್ಗಾಮಂತ್ರ ಹೋಮ ಮತ್ತು ಯೋಗಿನೀ ಬಲಿ ಪೂಜಾದಿಗಳು ನಡೆಯಲಿದೆ. ಮಾ.2ರಂದು ಬೆಳಿಗ್ಗೆ 6.15ರಿಂದ ಗದ್ದಿಗೆಯಲ್ಲಿ ಶ್ರೀಚಕ್ರಯಂತ್ರೋದ್ಧಾರದೊಂದಿಗೆ ಶ್ರೀವಿದ್ಯಾ ಶ್ರೀಚಕ್ರಯಂತ್ರಪೂಜಾ ಮತ್ತು ದಿವ್ಯ ಶ್ರೀಚಕ್ರಯಂತ್ರ ದರ್ಶನ, ಖಡ್ಗಮಾಲಾಮಂತ್ರ ಹೋಮ, ಬೆಳಿಗ್ಗೆ ಗಂಟೆ 11ರಿಂದ ಶ್ರೀ ಯಂತ್ರಪ್ರಸನ್ನ ಪೂಜಾ ನಡೆಯಲಿದೆ.
ಸಂಜೆ 5ರಿಂದ ಚತುಷಷ್ಠಿ, ಉಪಚಾರಪೂಜಾ, ಅಷ್ಟಾವಧಾನ ಸೇವಾ, ಮಹಾಪೂಜೆ, ಗದ್ದಿಗೆಯಲ್ಲಿ ಶ್ರೀ ಚಕ್ರಯಂತ್ರದ ಮರುಸ್ಥಾಪನೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.


ಪ್ರತಿಷ್ಠಾ ವರ್ಧಂತಿ ಪರ್ವಕಾಲದಲ್ಲಿ  ವರ್ಷದಲ್ಲಿ ಒಂದು ದಿನ ಮಾತ್ರ ಅಮ್ಮನ ಶ್ರೀಚಕ್ರ ಯಂತ್ರದ ದರುಶನಕ್ಕೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲಾಗುವುದು.


ಈ ಮೂರೂ ದಿನಗಳಲ್ಲಿ ಮಧ್ಯಾಹ್ನ 12ರಿಂದ 3ರ ವರೆಗೆ ಹಾಗೂ ರಾತ್ರಿ ಗಂಟೆ 7 ರಿಂದ 9ರ ವರೆಗೆ ಮಹಾಅನ್ನಪ್ರಸಾದ ಸಂತರ್ಪಣೆ ನಡೆಯಲಿದೆ.


ಪ್ರತಿದಿನ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ, ಆಯ್ದ ತಂಡಗಳಿಂದ ಭಜನಾ ಕಾರ್ಯಕ್ರಮ, ಫೆ.28ರಂದು ರಾತ್ರಿ ಗಂಟೆ 8ರಿಂದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಝೀ ಕನ್ನಡ ಸರಿಗಮಪ ಖ್ಯಾತಿಯ ವಿದ್ವಾನ್ ಯಶವಂತ್ ಎಂ.ಜಿ. ಮತ್ತು ಬಳಗದವರಿಂದ 'ಗಾನ ವೈಭವ',  ಮಾ.1ರಂದು ರಾತ್ರಿ 8ರಿಂದ ಕಾಪು ಅಮ್ಮನ ಮಕ್ಕಳ ತಂಡ ಪುಣೆ ಘಟಕದಿಂದ 'ಸಿಂದೂರ' ವಿಶೇಷ ನೃತ್ಯ ರೂಪಕ, 8.30ರಿಂದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾ ಬಳಗದವರಿಂದ 'ಜೋಡು ಜೀಟಿಗೆ' ಭಕ್ತಿ ಪ್ರಧಾನ ತುಳು ನಾಟಕ, ಮಾ.2ರಂದು ರಾತ್ರಿ 8ರಿಂದ ಬೈಲೂರು ಚೈತನ್ಯ ಕಲಾವಿದರಿಂದ ತುಳು ಹಾಸ್ಯಮಯ ನಾಟಕ 'ರಾಘು ಮಾಸ್ಟ್ರು' ನಡೆಯಲಿದೆ.

ಹಸಿರುವಾಣಿ ಹೊರೆಕಾಣಿಕೆ
ಫೆ.26ರಂದು ಅಪರಾಹ್ನ 4 ಗಂಟೆಗೆ ಶ್ರೀಕ್ಷೇತ್ರ ದಂಡತೀರ್ಥ ಮಠದಿಂದ ವಿಜೃಂಭಣೆಯ  ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ ನಡೆಯಲಿದೆ.


ಫೆ.28ರಿಂದ ಮಾ. 4ರ ವರೆಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಬೃಹತ್ ವಸ್ತುಪ್ರದರ್ಶನ ಮತ್ತು ಕೈಮಗ್ಗ ಸೀರೆ- ಖಾದಿ, ಕೃಷಿ - ಕೌಶಲ– ಆಹಾರ ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ನಡಿಕೆರೆ ರತ್ನಾಕರ ಶೆಟ್ಟಿ ವಿವರಿಸಿದರು.


ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಮಾಧವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಮೊಕ್ತೇಸರರಾದ ಶೇಖರ್ ಸಾಲ್ಯಾನ್, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತ ದೇವಾಡಿಗ, ಪ್ರಭಾಕರ ಪೂಜಾರಿ, ಜಯರಾಮ ಆಚಾರ್ಯ ಮತ್ತು ರಘುರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.