ಉತ್ತಮ ಆರೋಗ್ಯದಿಂದ ಶೈಕ್ಷಣಿಕ ಪ್ರಗತಿ

ಉಡುಪಿ | ಲೋಕಬಂಧು ನ್ಯೂಸ್
ಆರೋಗ್ಯ ಮತ್ತು ಶಿಕ್ಷಣ ಒಂದಕ್ಕೊಂದು ಪೂರಕ. ಉತ್ತಮ ಆರೋಗ್ಯ ಹೊಂದಿದ್ದಾಗ ಪಾಠದ ಬಗ್ಗೆ ಆಸಕ್ತಿ ಹೆಚ್ಚಿ ಕಲಿತದ್ದು ನೆನಪಿನಲ್ಲಿ ಉಳಿಯುತ್ತದೆ. ಅದರಿಂದಾಗಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸುತ್ತಾರೆ. ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮ ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಹೊಂದಲು ಸರ್ಕಾರದ ವತಿಯಿಂದ ನಡೆಸಲಾಗುವ ಉಪಕ್ರಮವಾಗಿದ್ದು, ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ಎಂದು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಉಡುಪಿ ಸಂಯುಕ್ತ ಆಶ್ರಯದಲ್ಲಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಸಮನ್ವಯದಿಂದ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮ ರಾಜ್ಯಾದ್ಯಂತ ಯಶಸ್ಸನ್ನು ಕಂಡಿದೆ. ಮಕ್ಕಳಲ್ಲಿ ಜಂತು ಹುಳುವಿನ ಬಾಧೆ ಗಣನೀಯವಾಗಿ ಕಡಿಮೆಯಾಗಿದ್ದು ಜಂತು ಹುಳು ನಿವಾರಣೆಯಲ್ಲಿ ಶೇ.90ರಷ್ಟು ಪ್ರಗತಿ ಸಾಧಿಸಲಾಗಿದೆ. ಅಂಗನವಾಡಿ ಮಕ್ಕಳಿಂದ ಹಿಡಿದು ಪ್ರೌಢಶಾಲಾ ವಿಭಾಗದ ಮಕ್ಕಳ ವರೆಗೆ ಎಲ್ಲರಿಗೂ ಅಲ್ಬೆಂಡಝೋಲ್ ಮಾತ್ರೆಗಳನ್ನು ವರ್ಷಕ್ಕೆ ಎರಡು ಬಾರಿ ನೀಡಲಾಗುತ್ತಿದೆ. ಅಭಿಯಾನದ ದಿನದಂದು ತಪ್ಪಿಹೋದ ಮಕ್ಕಳಿಗೆ ಮನೆ ಮನೆ ಭೇಟಿ ಮೂಲಕ ಮಾತ್ರೆಗಳನ್ನು ತಲುಪಿಸಲಾಗುತ್ತಿದ್ದು, ಆಶಾ ಕಾರ್ಹಕರ್ತರು, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ. ಅವರೆಲ್ಲರ ಕಾರ್ಯ ಅಭಿನಂದನೀಯ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ್ ಹುಬ್ಬಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಅಲ್ಬೆಂಡಝೋಲ್ ಮಾತ್ರೆ ಸೇವಿಸಬಹುದು. ಅದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ವಿಶೇಷವಾಗಿ ಹೆಣ್ಣು ಮಕ್ಕಳು ಈ ಮಾತ್ರೆಗಳನ್ನು ಸೇವಿಸುವುದರಿಂದ ಭವಿಷ್ಯದಲ್ಲಿ ವೈವಾಹಿಕ ಬದುಕಿನಲ್ಲಿ ಎದುರಾಗಬಹುದಾದ ಅಪೌಷ್ಠಿಕತೆ ಮತ್ತು ರಕ್ತಹೀನತೆಯಂಥ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಬಹುದು.


ವಿದ್ಯಾರ್ಥಿಗಳು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಯಲ್ಲಿ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಆಹಾರ ಸೇವಿಸುವ ಮುನ್ನ ಕೈಗಳನ್ನು ತೊಳೆದುಕೊಳ್ಳುವ ಜೊತೆಗೆ ತಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡು ಆರೋಗ್ಯವಂತರಾಗಬೇಕು. ಆರೋಗ್ಯ ಇಲ್ಲವಾದಲ್ಲಿ ಶಿಕ್ಷಣವೂ ಇರುವುದಿಲ್ಲ ಎಂದರು.


ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೇಶ್ ಸಿ. ಮಾತನಾಡಿ, ವಿದ್ಯಾರ್ಥಿಗಳು ಕಲಿಕೆ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು. ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಜಂತುಹುಳು ನಿವಾರಣೆಗೆ ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ತಪ್ಪದೇ ಸೇವಿಸಬೇಕು ಎಂದರು.


ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಜೋತ್ಸ್ನಾ.ಬಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಜಂತು ಹುಳು ನಿವಾರಣೆ ಜಾಗೃತಿ ಕುರಿತು ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಇಂದಿರಾ ಹಾಗೂ ವಿದ್ಯಾರ್ಥಿ ಲಗಳು ಉಪಸ್ಥಿತರಿದ್ದರು.


ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಸ್ವಾಗತಿಸಿದರು. ಶಶಿಧರ್  ಎಚ್. ನಿರೂಪಿಸಿ, ಡಿಪಿಸಿ ಸುಧೀಂದ್ರ ವಂದಿಸಿದರು.