ಅಪ್ಪಣ್ಣ ಹೆಗ್ಡೆ ನಿಧನ: ಗಣ್ಯರ ಸಂತಾಪ

ಕುಂದಾಪುರ | ಲೋಕಬಂಧು ನ್ಯೂಸ್
ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪುತ್ತಿಗೆ ಶ್ರೀ
ಬೈಂದೂರು ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಅವರ ನಿಧನ ವಾರ್ತೆ ತಿಳಿದು ಖೇದವಾಯಿತು.
ಶ್ರೀಮಠದ ಅಭಿಮಾನಿಗಳಾಗಿದ್ದ ಅವರು ನಮ್ಮ ಅನೇಕ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿದ್ದರು.
ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಶ್ರೀಕೃಷ್ಣ ಮುಖ್ಯಪ್ರಾಣದೇವರಲ್ಲಿ ಪ್ರಾರ್ಥಿಸುವುದಾಗಿ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸಂತಾಪ ಸಂದೇಶ ನೀಡಿದ್ದಾರೆ.


ಪೇಜಾವರ ಶ್ರೀ
ಮಾಜಿ ಶಾಸಕರೂ ಸಾಮಾಜಿಕ- ಧಾರ್ಮಿಕ ಕ್ಷೇತ್ರದ ಧೀಮಂತ ಮುಂದಾಳು ಆಗಿದ್ದ ಅಪ್ಪಣ್ಣ ಹೆಗ್ಡೆ ನಿಧನರಾಗಿರುವ ವಿಷಯ ತಿಳಿದು ತೀವ್ರ ವಿಷಾದವಾಯಿತು.
ತನ್ನ ಸರಳತೆ ಸೌಜನ್ಯ ಸಜ್ಜನಿಕೆ ನಿರಾಡಂಬರ ವ್ಯಕ್ತಿತ್ವ, ಮಾನವೀಯ ಕಳಕಳಿಯ ಸಾಮಾಜಿಕ ಸೇವಾತತ್ಪರತೆ ,ನೂರಾರು ಸಾಮಾಜಿಕ ಕಾರ್ಯಗಳಿಗೆ ನೀಡಿದ ಮಾರ್ಗದರ್ಶನ ,  ಧರ್ಮದರ್ಶಿಯಾಗಿ ಹಲವಾರು ಧರ್ಮಕಾರ್ಯಗಳಿಗೆ ನೀಡಿದ ನೇತೃತ್ವ, ಮೌಲ್ಯಾಧಾರಿತ ರಾಜಕಾರಣದ ಅಮೂಲ್ಯ ಪ್ರತಿನಿಧಿ ಹೀಗೆ  ಅನೇಕ ಕಾರಣಗಳಿಗಾಗಿ ಹೆಗ್ಡೆಯವರು ಬಹುಕಾಲ ಸ್ಮರಣೆಯಲ್ಲಿರಬಲ್ಲರು.


ಬಹಳ ವಿಶೇಷವೆಂದರೆ ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಐದೂ ಪರ್ಯಾಯಗಳನ್ನು ಕಂಡ ತೀರಾ ಅಪರೂಪದ ವ್ಯಕ್ತಿಯಾಗಿದ್ದರು. ಶ್ರೀಮಠದ ವಿಶೇಷ ಅಭಿಮಾನಿಗಳಾಗಿದ್ದ ಅವರಿಗೆ ಗುರುಗಳು ತಮ್ಮ ಪಂಚಮ ಪರ್ಯಾಯೋತ್ಸವದಲ್ಲಿ ದರ್ಬಾರ್ ಸಂಮಾನದೊಂದಿಗೆ ಪುರಸ್ಕರಿಸಿದ್ದರು.


ಶ್ರೀಮಠದ ಮಾತ್ರವಲ್ಲ ಉಡುಪಿಯ ಅನೇಕ ಪರ್ಯಾಯೋತ್ಸವಗಳಿಗೆ ಕುಂದಾಪುರ, ಬೈಂದೂರು ಭಾಗದ ಭಕ್ತರಿಂದ ದೊಡ್ಡ ಮಟ್ಟದಲ್ಲಿ ಹೊರೆಕಾಣಿಕೆ ಸಂಗ್ರಹಿಸಿ ತರುವಲ್ಲಿ ಅವರ ಉತ್ಸಾಹಿ ನೇತೃತ್ವ ಮತ್ತು ಮಾರ್ಗದರ್ಶನ ಬಹುದೊಡ್ಡ ಪಾತ್ರವಹಿಸುತ್ತಿದ್ದರು.


ಅವರಿಗೆ ಸದ್ಗತಿ ಕರುಣಿಸುವಂತೆ ಆರಾಧ್ಯಮೂರ್ತಿ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥಿಸುವುದಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾರೈಸಿದ್ದಾರೆ.


ಡಾ.ಹೆಗ್ಗಡೆ
ಬೈಂದೂರಿನ ಹಿರಿಯ ರಾಜಕೀಯ ಮುತ್ಸದ್ದಿ ಬಿ. ಅಪ್ಪಣ್ಣ ಹೆಗ್ಡೆ ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು.
ತಮ್ಮ ಸರಳ ಜೀವನ ಹಾಗೂ ಉನ್ನತ ಚಿಂತನೆಯೊಂದಿಗೆ ಧಾರ್ಮಿಕ, ಶಿಕ್ಷಣ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅನುಪಮ ಸೇವೆ ಮಾಡಿ ಜನಪ್ರಿಯರಾಗಿದ್ದರು. ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಉಂಟಾದಾಗ ಮಾತುಕತೆ ಮೂಲಕ ಸೌಹಾರ್ದಯುತವಾಗಿ ಪರಿಹರಿಸುವ ಚಾಕಚಕ್ಯತೆ ಅವರಲ್ಲಿತ್ತು.


ಧರ್ಮಸ್ಥಳದ ಅಭಿಮಾನಿಯೂ, ಭಕ್ತರೂ ಆಗಿದ್ದ ಅವರು ನಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ಸಕ್ರಿಯ ಸಹಕಾರ ನೀಡುತ್ತಿದ್ದರು. ಆ ಭಾಗದಲ್ಲಿ ನಮ್ಮ ಯಾವುದೇ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಗೊಳಿಸುವಲ್ಲಿ ಅವರು ನೇತೃತ್ವ ವಹಿಸಿ ಬೆಂಬಲಿಸುತ್ತಿದ್ದರು.


ವಿಶೇಷವಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆ ಚಟುವಟಿಕೆಗಳಿಗೆ ಉತ್ತಮ ಸಹಕಾರ ನೀಡಿ ಪ್ರೋತ್ಸಾಹಿಸಿದ್ದರು.


ಗ್ರಾಮ ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ, ಶಾಸಕರಾಗಿ ಅವರು ಉತ್ತಮ ಸೇವೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.


ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರು, ಊರಿನವರು ಹಾಗೂ ಅಭಿಮಾನಿಗಳಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥಸ್ವಾಮಿ ಹರಸಲಿ ಎಂದು ಪ್ರಾರ್ಥಿಸುವುದಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.