ಲೋಕಬಂಧು ನ್ಯೂಸ್, ಉಡುಪಿ
ತಪ್ಪು ಯಾವುದು, ಸರಿ ಯಾವುದು ಎಂದು ತಿಳಿಸಿಕೊಡುವ ನಾಟಕಗಳು ಸಮಾಜವನ್ನು ಸದಾ ಎಚ್ಚರಿಸುತ್ತಿರುತ್ತವೆ. ಸರಿದಾರಿಯಲ್ಲಿ ನಡೆಯಲು ಬೆಳಕು ತೋರುತ್ತವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬದ ನಾಲ್ಕನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.
ಯಾವುದೇ ಸಂಘಟನೆ ಅದರ ಸದಸ್ಯರ ಒಗ್ಗಟ್ಟಿನ ಆಧಾರದಲ್ಲಿ ಮುಂದುವರಿಯುತ್ತದೆ, ಬೆಳೆಯುತ್ತದೆ. ಒಗ್ಗಟ್ಟಿಲ್ಲದೇ ಹೋದರೆ ಬೆಳೆಯಲು ಸಾಧ್ಯವಿಲ್ಲ. ಸಂಘಟನೆ ಕಷ್ಟದ ಕೆಲಸ. ಶ್ರಮ ವಹಿಸುವ ಸದಸ್ಯರಿದ್ದಲ್ಲಿ ಅದು ಸುಲಭ ಸಾಧ್ಯ. ಹಣ ಬೇಕು, ಪ್ರೇಕ್ಷಕರ ಪ್ರೋತ್ಸಾಹವೂ ಇರಬೇಕು. ಆಗ ಮಾತ್ರ ಸಂಘಸಂಸ್ಥೆಗಳು ಯಶಸ್ವಿಯಾಗಲು ಸಾಧ್ಯ ಎಂದರು.
ರಂಗ ಸಾಧಕ ಗೌರವ ಸ್ವೀಕರಿಸಿದ ಯಕ್ಷಗುರು ನಿತ್ಯಾನಂದ ಶೆಟ್ಟಿಗಾರ್ ಮಾತನಾಡಿ, ಉಡುಪಿ ತುಳುಕೂಟ ನಡೆಸುವ ತುಳು ನಾಟಕ ಸ್ಪರ್ಧೆಯಿಂದಾಗಿ ಅನೇಕ ತಂಡಗಳು ಉಳಿದು ಬೆಳೆದಿವೆ. ತುಳುನಾಡಿನಲ್ಲಿರುವ ಕಲೆ ಬೇರೆಲ್ಲೂ ಸಿಗುವುದಿಲ್ಲ. ಅಭಿಮಾನಿಗಳ ಪ್ರೋತ್ಸಾಹದಿಂದ ಕಲಾವಿದರು ಬೆಳೆದಿದ್ದಾರೆ ಎಂದರು.
ಮಲ್ಪೆ ಬಿಲ್ಲವ ಸಮಾಜ ಸೇವಾಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ ಮಾತನಾಡಿ, ನಾಟಕ ಎಂದರೆ ಮನರಂಜನೆ ಮಾತ್ರವಲ್ಲ, ನಮ್ಮ ಬದುಕಿನ ಆಗುಹೋಗುಗಳನ್ನು ದುಃಖ ದುಮ್ಮಾನಗಳನ್ನು, ಸುಖ ಕಷ್ಟಗಳನ್ನು, ಪ್ರೀತಿ ವಿರಹಗಳನ್ನು ಬಿಂಬಿಸುವ ವೇದಿಕೆ. ಸಿನಿಮಾ ತಾರೆಯರಿಗಿಂತ ನಾಟಕ ಕಲಾವಿದರ ಶ್ರಮ ಅಪಾರ. ನಾಟಕ ಕಲೆ ಶ್ರೇಷ್ಠ ಕಲೆ. ಯುವಜನರು ಇದರಲ್ಲಿ ಇನ್ನಷ್ಟು ತೊಡಗಿಕೊಳ್ಳಬೇಕು ಎಂದರು.
ನಗರಸಭೆ ಮಾಜಿ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಮಾತನಾಡಿ, ಸ್ವತಃ ರಂಗ ಕಲಾವಿದರಾಗಿರುವ ಸುಮನಸಾದವರು ಬೇರೆ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ಸ್ತುತ್ಯರ್ಹ. ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲಿ ಎಂದು ಹಾರೈಸಿದರು.
ಉಡುಪಿ ಡೆಂಟಾಕೇರ್ ಡಾ.ವಿಜಯೇಂದ್ರ ವಸಂತ್ ಮಾತನಾಡಿ ಮೊಬೈಲ್, ಡಿಜಿಟಲ್, ಆನ್‍ಲೈನ್ ಯುಗದಲ್ಲಿ ಕಲೆ, ಕಲಾವಿದನ ಅಂತ್ಯ ಆಗಿದೆಯಾ ಎಂಬ ಪ್ರಶ್ನೆ ಮೂಡಿದಾಗ ಸುಮನಸಾ ಸಂಘಟನೆ ಇಲ್ಲ ಎಂದು ಸಾಬೀತು ಮಾಡುತ್ತಾ ಬಂದಿದೆ. ಕಲೆಯೊಳಗೆ ಪ್ರಕೃತಿ, ಸಂಸ್ಕೃತಿ, ವಿಕೃತಿ ಇರುತ್ತದೆ. ಸ್ವರ್ಗಕ್ಕೂ ಮಿಗಿಲಾದ ಅನುಭವ ನೀಡುತ್ತಾ ಬಂದಿರುವ ಸುಮನಸಾ ಕಲಾವಿದರು ಪ್ರಕೃತಿ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ ಆರೋಗ್ಯ ಸರಿ ಇರಬೇಕು. ಇವೆಲ್ಲವೂ ಆರೋಗ್ಯವಾಗಿರಬೇಕಿದ್ದರೆ ರಂಗಭೂಮಿ ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ದೈಹಿಕ ಆರೋಗ್ಯಕ್ಕೆ ಔಷಧ ದಿನದ 24 ಗಂಟೆ ಸಿಗಬಹುದು. ಆದರೆ, ಮಾನಸಿಕ ಆರೋಗ್ಯಕ್ಕೆ ಬೇಕಾದ ನಾಟಕಗಳು ಯಾವಾಗಲು ಸಿಗುವುದಿಲ್ಲ. ಪ್ರದರ್ಶನ ಇರುವಾಗ ವೀಕ್ಷಿಸಬೇಕು ಎಂದವರು ಸಲಹೆ ನೀಡಿದರು.
ಸೌಹಾರ್ದ ಸಂಘ ನಿಯಮಿತದ ಅಧ್ಯಕ್ಷ ಬಿ.ಜಿ. ಸುಬ್ಬರಾವ್, ಮಲ್ಪೆ ಮತ್ಶ್ಯರಾಜ್ ಗ್ರೂಪ್‍ನ ಅಭಿನಂದನ್ ಕೆ. ಕೋಟ್ಯಾನ್, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು.
ವಿದ್ದು ಉಚ್ಚಿಲ್ ಸ್ವಾಗತಿಸಿದರು. ರಾಗಿಣಿ ಹರೀಶ್ ವಂದಿಸಿದರು. ಕಾರ್ತಿಕ್ ಪ್ರಭು ಮತ್ತು ಸೌಭಾಗ್ಯ ತಂತ್ರಿ ನಿರೂಪಿಸಿದರು.