ರಂಗ ಚಟುವಟಿಕೆಗಳಿಂದ ಸೃಜನಶೀಲ ವ್ಯಕ್ತಿತ್ವ ನಿರ್ಮಾಣ

ಲೋಕಬಂಧು ನ್ಯೂಸ್, ಉಡುಪಿ
ನಡಿಗೆ, ಓಟ ಇತ್ಯಾದಿ ದೈಹಿಕ ಆರೋಗ್ಯ ಉಙಟುಮಾಡಿದರೆ ಮಾಡಿದರೆ, ರಂಗ ಚಟುವಟಿಕೆಗಳು ಸೃಜನಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗುತ್ತವೆ. ಮಾನಸಿಕ ಒತ್ತಡ ಕಡಿಮೆ ಮಾಡಿ ಉತ್ತಮ ವ್ಯಕ್ತಿಯನ್ನಾಗಿಸುತ್ತದೆ ಎಂದು ಮಣಿಪಾಲ ಎಚ್‌ಪಿಆರ್‌ ಸಮೂಹ ಸಂಸ್ಥೆ ಅಧ್ಯಕ್ಷ ಹರಿಪ್ರಸಾದ್‌ ರೈ ಹೇಳಿದರು.ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬದ ಐದನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.


ಉಡುಪಿಯ ಶ್ರೀಮಂತ ಸಾಂಸ್ಕೃತಿಕ ಕಲೆಯನ್ನು ಉಳಿಸಿ, ಬೆಳೆಸುವ ಕೆಲಸವನ್ನು ಸುಮನಸಾ ಕೊಡವೂರು ಸಂಘಟನೆ ಮಾಡುತ್ತಾ ಬಂದಿದೆ ಎಂದವರು ಶ್ಲಾಘಿಸಿದರು.


ರಂಗಸಾಧಕ ಸನ್ಮಾನ ಸ್ವೀಕರಿಸಿದ ಬಹುಕ್ಷೇತ್ರದ ಸಾಧಕಿ ಕುಸುಮಾ ಕಾಮತ್‌ ಮಾತನಾಡಿ, ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಈ ಸನ್ಮಾನ ಸಲ್ಲಲಿದೆ. ಸುಂದರ ಮನಸ್ಸುಗಳು ನಳನಳಿಸುವ ಸಂಘಟನೆ. ಕಠಿಣ ಪರಿಶ್ರಮ, ಶಿಸ್ತು, ಹೊಂದಾಣಿಕೆ ಇದ್ದಾಗ ಮಾತ್ರ ಮುಂದುವರಿಯಲು ಸಾಧ್ಯ. ಅವೆಲ್ಲ ಗುಣಗಳನ್ನು ಸುಮನಸಾ ಕೊಡವೂರು ತಂಡ ಹೊಂದಿದೆ ಎಂದರು.


ಕಲಾವಿದರಿಗೆ ಅನೇಕ ನೋವುಗಳಿರುತ್ತವೆ. ಆದರೆ, ರಂಗದ ಮೇಲೆ ಬಂದಾಗ ಎಲ್ಲ ನೋವುಗಳನ್ನು ಮರೆತು ಪ್ರದರ್ಶನ ನೀಡುತ್ತಾರೆ. ಕಲೆಗೆ ಭಾಷೆಯ ಹಂಗಿಲ್ಲ. ಯಾವುದೇ ಭಾಷೆಯಾದರೂ ಕಲೆ ಅರ್ಥವಾಗುತ್ತದೆ ಎಂದು ವಿಶ್ಲೇಷಿಸಿದರು.


ಕೊಡವೂರು ಶಿರ್ಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ ತೋಟದಮನೆ, ಬೊಳ್ಜೆ ಶ್ರೀ ಬ್ರಹ್ಮ ಬೈದೇರುಗಳ ಗರೋಡಿ ಅಧ್ಯಕ್ಷ ದಿನೇಶ್ ಸಾಲಿಯಾನ್, ಸಿತಾರ ಎಂಟರ್ ಪ್ರೈಸಸ್ ಪಾಲುದಾರ ಪ್ರಭಾಕರ ತಿಂಗಳಾಯ, ಮಲ್ಪೆ ಬೋಟ್ ಸಾಯಿಶ್ಯಾಮ್ ಉದ್ಯಮಿ ಹರೀಶ್ ಪೂಜಾರಿ, ಉಡುಪಿ ವ್ಯಾಸ ಮುದ್ರಣ ಮಾಲೀಕ ರಾಮಚಂದ್ರ ಪೂಜಾರಿ, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಉಪಾಧ್ಯಕ್ಷ ವಿನಯ್‌ ಕಲ್ಮಾಡಿ ಉಪಸ್ಥಿತರಿದ್ದರು.


ಪ್ರಜ್ಞಾಶ್ರೀ ಸ್ವಾಗತಿಸಿದರು. ಪ್ರಜ್ಞಾಬವಂದಿಸಿದರು, ಶ್ರೀವತ್ಸ ರಾವ್‌ ಕಾರ್ಯಕ್ರಮ ನಿರೂಪಿಸಿದರು.