ಕಟೀಲಿನ ’ಚಿತ್ರಕೂಟ’ದಲ್ಲಿ ಚಿತ್ತಾರ: ಚಿತ್ರಕಲಾವಿದರಿಗೆ ಆಹ್ವಾನ

ಲೋಕಬಂಧು ನ್ಯೂಸ್, ಕಿನ್ನಿಗೋಳಿ
ಕಟೀಲಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಕುದ್ರುನಲ್ಲಿ ಕಲಾವಿದರ ಕುಂಚದಿಂದ ಚಿತ್ತಾರ ಮೈದಳೆಯಲಿದೆ.ಕಟೀಲು ದೇಗುಲದ ಕುದ್ರು ನಂದಿನಿ ನದಿಯ ಮಧ್ಯದಲ್ಲಿರುವ ಪ್ರಕೃತಿ ವಿಸ್ಮಯ. ಕಟೀಲು
ದೇಗುಲ ಹಾಗೂ ಮೂಲಸ್ಥಳವೆಂದು ನಂಬಲಾಗಿರುವ ಈ ಕುದ್ರು, ನಂದಿನಿ ನದಿಯ ಮಧ್ಯದಲ್ಲಿರುವ ಎರಡು ಪುಟ್ಟ ದ್ವೀಪಗಳು. ಇವೆರಡೂ ಆಧ್ಯಾತ್ಮದ ಧ್ಯಾನಾಸಕ್ತರಿಗೆ ವಿಶಿಷ್ಟ ಅನುಭವ ನೀಡಬಲ್ಲ ಆರಾಧನಾ ಕೇಂದ್ರಗಳು.


ಬರ ನೀಗಲು ಭುವಿಗೆ ಬಾರೆಂಬ ಮುನಿ ಜಾಬಾಲಿಯ ಪ್ರಾರ್ಥನೆಯನ್ನು ತಿರಸ್ಕರಿಸಿದ ಕಾಮಧೇನುವಿನ ಮಗಳು ನಂದಿನಿ, ಶಾಪದಿಂದ  ನದಿಯಾಗಿ ಹರಿದಳು. ಕೊಟ್ಟ ಅಭಯದಂತೆ ದೇವಿ ದುರುಳ ಅರುಣಾಸುರನ ತರಿದು ಕಟೀಲಿನಲ್ಲಿ ನೆಲೆಯಾದಳು. ಇದು ಪುರಾಣದ ಕತೆ.

ಈಗಿನ ಮಿಜಾರಿನ ಕನಕಬೆಟ್ಟು ಎಂಬಲ್ಲಿ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರಿನ ಒಸರು ನಂದಿನಿಯಾಗಿ ಮುಂದುವರಿಯುತ್ತದೆ. ದುರ್ಗಾಪರಮೇಶ್ವರಿ ಭ್ರಮರರೂಪ ತಾಳಿರುವುದೂ ಒಂದರ್ಥದಲ್ಲಿ ಪ್ರಕೃತಿ ಆರಾಧನೆಯ ಸಂಕೇತ. ಕಟೀಲಿನ ಕುದ್ರು ನಾಗಾರಾಧನೆಗೆ ಸಾಕ್ಷಿಯಾಗಿ ಪ್ರಕೃತಿ ಆರಾಧನೆಯ ಸ್ಥಳವಾಗಿದೆ.


ಸಾಹಿತ್ಯ ಸೃಷ್ಟಿಗೆ ಪ್ರೇರಣೆ, ಸ್ಪೂರ್ತಿ ಪ್ರಕೃತಿ. ನಂದಿನಿಯ ನಿನಾದದೊಂದಿಗೆ ಎರಡು
ವೇದಿಕೆಗಳಲ್ಲಿ ಸಾಹಿತ್ಯ ಅರಳುವ ಸಮಯ, ಕಲಾಕಾರರ ಚಿತ್ತಗಳಲ್ಲಿ ಮೂಡುವ ಪ್ರಕೃತಿ
ಚಿತ್ತಾರವಾಗುವ ಬಗೆಯನ್ನು ಮಾ.1ರಂದು ನಡೆಯುವ ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿದೆ.


ಕಟೀಲು ಕ್ಷೇತ್ರ ಪುರಾಣ, ನಂದಿನಿ ನದಿ, ಅದರ ಪಾವಿತ್ರ್ಯ, ಕಟೀಲಿನಲ್ಲಿ ಪ್ರಕೃತಿ ಆರಾಧನೆಯ ಕಲ್ಪನೆ, ಭ್ರಾಮರಿಯ ಆರಾಧನೆ, ನಾಗಾರಾಧನೆ, ಕಟೀಲಿನಲ್ಲಿ ಯಕ್ಷಗಾನದ ಮೂಲಕ ನಡೆಯುತ್ತಿರುವ ಕಲಾರಾಧನೆ, ಹಸಿವು ನೀಗಿಸುವ ಅನ್ನದಾನ, ವಿದ್ಯಾದಾನ ಹೀಗೆ ಯಾವುದೇ ವಿಚಾರವಾಗಿ ಚಿತ್ರಗಳನ್ನು
ಬಿಡಿಸಬಹುದು.


ಕಲಾವಿದರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕ್ಯಾನ್ವಾಸ್ ಹಾಗೂ ಬಣ್ಣ ನೀಡಲಾಗುವುದು. ಬಿಡಿಸಿದ ಚಿತ್ರವನ್ನು ಕಟೀಲು ದೇವಿಯ ಪದತಲಕ್ಕೆ ಸಮರ್ಪಿಸಿ ಧನ್ಯರಾಗಬಹುದು. ಸೂಕ್ತ ಸ್ಥಳದಲ್ಲಿ ಈ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗುವುದು. ಚಿತ್ರಕಾರರಿಗೆ ದೇವಿಯ ಪ್ರಸಾದ ನೀಡಲಾಗುವುದು.


ಸಮ್ಮೇಳನದ ಸಂದರ್ಭ ಚಿತ್ರ ಬಿಡಿಸುವ ಕಾರ್ಯಕ್ರಮಕ್ಕೆ 'ಚಿತ್ರಕೂಟ' ಎಂಬ ಹೆಸರಿಡಲಾಗಿದೆ.


ಕಲಾಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಫೆ. 25ರೊಳಗೆ ಸ್ವಾತಿ ಕುಲಾಲ್ (9686139426) ಅಥವಾ  ಲೋಲಾಕ್ಷ ಕಿನ್ನಿಗೋಳಿ (9845362763) ಅವರಲ್ಲಿ ಹೆಸರು ನೋಂದಾಯಿಸುವಂತೆ
ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.