ಲೋಕಬಂಧು ನ್ಯೂಸ್, ಉಡುಪಿ
ಯುವ ಪೀಳಿಗೆಯ ಪ್ರತಿಭೆ ಅರಳಲು, ಯುವಜನರು ಬೆಳೆಯಲು ರಂಗಭೂಮಿ ಸಹಕಾರಿ ಎಂದು ಉಡುಪಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಭಿಪ್ರಾಯ ವ್ಯಕ್ತಪಡಿಸಿದರು.ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ರಂಗಹಬ್ಬದ ಮೂರನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಂಗಳವಾರ ಮಾತನಾಡಿದರು.
ಸುಮನಸಾ ಸಂಸ್ಥೆಯ ಶಿಸ್ತು, ರಂಗ ಚಟುವಟಿಕೆ, ಸಮಾಜಮುಖಿ ಕಾರ್ಯಕ್ರಮಗಳು ಮಾದರಿ. ಮಕ್ಕಳನ್ನು ಬೆಳೆಸುವ ಕ್ರಮವನ್ನು ಈ ಸಂಘಟನೆಯಿಂದ ಕಲಿಯಬೇಕು ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗ ಚಟುವಟಿಕೆಗಳಿಂದ ನಮ್ಮಲ್ಲಿ ಮಾನವೀಯತೆ ಮೂಡಿಸುತ್ತವೆ. ಜನರನ್ನು ದಾರಿ ತಪ್ಪದಂತೆ ಸರಿದಾರಿಯಲ್ಲಿ ಒಯ್ಯುತ್ತವೆ. ಸಮಾಜದ ಅಂಕು-ಡೊಂಕುಗಳನ್ನು ರಂಗಭೂಮಿ ಎತ್ತಿತೋರಿಸುತ್ತದೆ ಎಂದರು.
ರಂಗಸಾಧಕ ಸನ್ಮಾನ ಸ್ವೀಕರಿಸಿದ ಸಂಗೀತ ಗುರು ರಮೇಶ್ ಕೆ. ಪುತ್ತೂರು ಮಾತನಾಡಿ, ಸಂಗೀತ ಕಲಿಯುವುದು ನಮ್ಮ ಕಾಲದಲ್ಲಿ ಕಷ್ಟದ ಕೆಲಸವಾಗಿತ್ತು. ಈಗ ರೆಕಾರ್ಡ್ ಮಾಡಿಕೊಂಡು ಬಂದು ಹಾಡುತ್ತಾರೆ. 'ಕರೊಕೆ ಬಂದ ಮೇಲೆ ಹಾಡುಗಾರ ಬಿಟ್ಟರೆ ಬೇರೆ ಯಾವ ಪಕ್ಕವಾದ್ಯಗಳು ಬೇಡವಾಗಿವೆ' ಎಂದು ಬೇಸರ ವ್ಯಕ್ತಪಡಿಸಿದರು.
ಹಾರ್ಮೋನಿಯಂ ಹಿಡಿದುಕೊಂಡು ನಾನು ಸಂಗೀತ ಲೋಕಕ್ಕೆ ಕಾಲಿಟ್ಟೆ. ಹಲವು ನಾಟಕ, ನೃತ್ಯಗಳಿಗೆ ಸಂಗೀತ ಸಂಯೋಜನೆ ಮಾಡಿದೆ. ಶಾಸ್ತ್ರೀಯ ಸಂಗೀತ ಕಲಿತು, ಕಲಿಸಿಕೊಟ್ಟಿದ್ದೇನೆ. ಇಂದು ಸಂಗೀತ ಸುಲಭವಾಗಿದೆ. ಆದರೆ, ನನಗೆ ರಂಗಭೂಮಿ ಮತ್ತು ಸಂಗೀತ ಬದುಕು ಕಟ್ಟಿಕೊಟ್ಟಿದೆ ಎಂದರು.
ಉದ್ಯಮಿಗಳಾದ ಸಾಧು ಸಾಲ್ಯಾನ್, ಮಹೇಶ್ ಶೆಣೈ ಮತ್ತು ಸಂತೋಷ್ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಈಡಿಗ ಮಹಾ ಮಂಡಳದ ಉಡುಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕಾಪು, ಹಿಂದೂ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಬಾಲಕೃಷ್ಣ ಶಿಬಾರ್ಲ ಸ್ವಾಗತಿಸಿದರು. ಶ್ರೀವತ್ಸ ವಂದಿಸಿದರು, ಗಣೇಶ್ ಸಗ್ರಿ ನಿರೂಪಿಸಿದರು.