ಲೋಕಬಂಧು ನ್ಯೂಸ್, ಕುಂದಾಪುರ
ಮೀನುಗಾರಿಕೆಗೆಂದು ಮಲ್ಪೆ ಬಂದರಿನಿಂದ ತೆರಳಿದ್ದ ಬೋಟ್ ಕುಂದಾಪುರ ಮತ್ತು ಗಂಗೊಳ್ಳಿ ನಡುವೆ ಸಮುದ್ರದಲ್ಲಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟ್‌ನ ಮೀನುಗಾರರು ರಕ್ಷಿಸಿದ್ದಾರೆ.ಕೆಮ್ಮಣ್ಣು ನಿವಾಸಿ ನಾಗರಾಜ್ ಪುತ್ರನ್ ಅವರಿಗೆ ಸೇರಿದ ಶ್ರೀ ದುರ್ಗಾಪರಮೇಶ್ವರಿ ಹೆಸರಿನ ಬೋಟ್ ಫೆ. 23ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟಿತ್ತು. ಫೆ. 24ರಂದು ಸಮುದ್ರದಲ್ಲಿ ಯಾವುದೋ ವಸ್ತು ಬೋಟ್‌ನ ಕೆಳಭಾಗಕ್ಕೆ ತಾಗಿದ ಪರಿಣಾಮ ಇಂಜಿನ್ ಅಡಿಭಾಗದಲ್ಲಿ ನೀರು ನುಗ್ಗಿ ಇಂಜಿನ್ ಸ್ಥಗಿತಗೊಂಡಿತು.
ಕೂಡಲೇ ಮೀನುಗಾರರು ಬೋಟಿನಿಂದ ನೀರು ಖಾಲಿ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ತಕ್ಷಣ ಮಲ್ಪೆಯ ಶ್ರೀಕೃಷ್ಣ ಬೋಟ್‌ನ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೋಟ್‌ನಲ್ಲಿದ್ದ ಕುಮಟಾದವರಾದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಮತ್ತು ಶ್ರೀನಿವಾಸ ಎಂಬ ಮೀನುಗಾರರನ್ನು ರಕ್ಷಿಸಿದರು.
ಬಳಿಕ ಶ್ರೀಕೃಷ್ಣ ಬೋಟ್ ಮೂಲಕ ಮುಳುಗುತ್ತಿದ್ದ ಬೋಟನ್ನು ಹಗ್ಗದಿಂದ ಕಟ್ಟಿ ಗಂಗೊಳ್ಳಿ ಬಂದರಿನತ್ತ ಸುಮಾರು 8-9 ನಾಟಿಕಲ್ ಮೈಲಿ ಎಳೆದುಕೊಂಡು ಬರಲಾಯಿತು. ಆದರೆ, ಸಮುದ್ರದಲ್ಲಿ ಬೀಸುತ್ತಿದ್ದ ಬಲವಾದ ಗಾಳಿ ಮತ್ತು ಅಲೆಗಳ ಆರ್ಭಟಕ್ಕೆ ಹಗ್ಗ ತುಂಡಾಗಿ ಬೋಟ್ ಸಂಪೂರ್ಣ ಮುಳುಗಡೆಯಾಗಿದೆ.
ಘಟನೆಯಿಂದ ಸುಮಾರು 60ರಿಂದ 65 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಬೋಟ್ ಮಾಲೀಕ ನಾಗರಾಜ್ ಪುತ್ರನ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.