ಲೋಕಬಂಧು ನ್ಯೂಸ್, ಕಾರ್ಕಳ
ನುಡಿದಂತೆ ನಡೆಯುವ ಸರ್ಕಾರ ನಮ್ಮದು. ಈ ನಿಟ್ಟಿನಲ್ಲಿ ಎಲ್ಲಾ ಭರವಸೆ, ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಸರ್ಕಾರ ಬದ್ಧ. ಜಾತ್ಯತೀತವಾಗಿ ಹಾಗೂ ಧರ್ಮಾತೀತವಾಗಿ ಸರ್ಕಾರದ ಸವಲತ್ತುಗಳನ್ನು ಸಮಾನವಾಗಿ ಹಂಚುವ ಕಾರ್ಯ ಮಾಡಲಾಗುತ್ತಿದೆ. ಆ ಮೂಲಕ ಸರ್ಕಾರದ ಸವಲತ್ತುಗಳು ಅರ್ಹರಿಗೆ ತಲುಪಬೇಕೆಂಬುದು ಸರ್ಕಾರದ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಕುಕ್ಕುಂದೂರು ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ನಿರ್ಮಿಸಲಾದ 'ಕಿಸಾನ್ ಸಭಾ' ಸಭಾಂಗಣದ ಉದ್ಘಾಟನೆ ಹಾಗೂ ಕುಕ್ಕುಂದೂರು ಮಹಾತ್ಮ ಗಾಂಧಿ ವಸತಿ ಪ್ರೌಢಶಾಲೆಯ 35ನೇ ವರ್ಷದ ಸಂಭ್ರಮೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಚಾಲನೆ ನೀಡಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆಗಳನ್ನು ಈಗಾಗಲೇ ಈಡೇರಿಸಲಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ 590 ಭರವಸೆಗಳನ್ನು ನೀಡಿದ್ದು, ಅದರಲ್ಲಿ 243 ಭರವಸೆ ಈಡೇರಿಸಿದ್ದೇವೆ. ಗೃಹಲಕ್ಷ್ಮೀ ಯೋಜನೆ ಮೂಲಕ 1 ಕೋಟಿ 24 ಲಕ್ಷ ಮಹಿಳೆಯರಿಗೆ ಪ್ರತೀ ತಿಂಗಳು 2 ಸಾವಿರ ರೂ. ನೀಡಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಲ್ಲಿ ಕೇಂದ್ರ ಸರ್ಕಾರ ನೀಡುವ 5 ಕೆ.ಜಿ. ಅಕ್ಕಿಗೆ ಹೆಚ್ವುವರಿಯಾಗಿ ರಾಜ್ಯ ಸರ್ಕಾರ 5 ಕೆ.ಜಿ. ಹೆಚ್ಚುವರಿ ಅಕ್ಕಿಯ ಹಣವನ್ನು ಫಲಾನುಭವಿಗಳಿಗೆ ನೀಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಅವರು ನಿಗಮದ ವತಿಯಿಂದ ಮುಖ್ಯಮಂತ್ರಿಯನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಈ ವೇಳೆ ಕುಕ್ಕುಂದೂರಿನ ಮಹಾತ್ಮಗಾಂಧಿ ವಸತಿ ಪ್ರೌಢಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಎಂ.ಸಿ ಆಚಾರ್ ಮತ್ತು ಮುಖ್ಯೋಪಾಧ್ಯಾಯ ಸಂಜೀವ ಪೂಜಾರಿ, ಶಿಕ್ಷಕಿ ನಿರ್ಮಲಾವತಿ, ಕಟ್ಟಡದ ವಾಸ್ತುವಿನ್ಯಾಸ ಮಾಡಿದ ಉಡುಪಿ ನಿರ್ಮಿತಿ ಕೇಂದ್ರದ ಪವನ್ ಮತ್ತು ನರಸಿಂಹ ಪೈ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಸಿ. ಮಹಾದೇವಪ್ಪ, ವಿ. ಸುನಿಲ್ ಕುಮಾರ್, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್, ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕಿಸಾನ್ ಸಭಾ ಟ್ರಸ್ಟ್ ಅಧ್ಯಕ್ಷ ಹರ್ಷ ಮೊಯ್ಲಿ ಮೊದಲಾದವರಿದ್ದರು.