ಲೋಕಬಂಧು ನ್ಯೂಸ್, ಕಾರ್ಕಳ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.ಕುಕ್ಕುಂದೂರಿನಲ್ಲಿ ಕಿಸಾನ್ ಸಭಾ ಟ್ರಸ್ಟ್ ವತಿಯಿಂದ ಬುಧವಾರ ನಡೆದ ಕಿಸಾನ್ ಸಭಾ ಸಭಾಂಗಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇದುವರೆಗೆ ಗೃಹಲಕ್ಷ್ಮಿ ಯೋಜನೆಯ 26 ಕಂತಿನ ಒಟ್ಟು 1.24 ಕೋಟಿ ಹಣವನ್ನು ಮಹಿಳೆಯರಿಗೆ ತಲಾ 52 ಸಾವಿರ ರೂ.ನಂತೆ ಜಮೆ ಮಾಡಿರುವುದಾಗಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಜೀವನ ನಮಗೆಲ್ಲ ಮಾದರಿ. ಬಡ ಮಕ್ಕಳಿಗೆ ಅನುಕೂಲ ಆಗುವ ದೃಷ್ಟಿಯಿಂದ ಸಿಇಟಿ ಆರಂಭಿಸಿ ಇಡೀ ದೇಶಕ್ಕೆ ಮಾದರಿ ಆಡಳಿತ ನೀಡಿದರು. ಅವರು ಆರಂಭಿಸಿದ ಸಿಇಟಿಯೇ ಮುಂದೆ ಕೇಂದ್ರ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ.) ಆರಂಭಕ್ಕೆ ಮಾದರಿಯಾಯಿತು ಎಂದರು.
ವೀರಪ್ಪ ಮೊಯ್ಲಿ ಆರಂಭಿಸಿದ ಮಹಾತ್ಮ ಗಾಂಧಿ ವಸತಿ ಶಾಲೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ. ಮೊಯ್ಲಿ ಅವರ ಜೀವನವೇ ನಮಗೆ ಆದರ್ಶ.
ಸಮಾಜ ಸೇವೆ ಎನ್ನುವುದು ಒಂದು ದಿನದ ಕೆಲಸವಲ್ಲ. ಅದು ಜೀವನದ ಧ್ಯೇಯವಾಗಬೇಕು. ನಮ್ಮ ಸಮಯ, ಶಕ್ತಿ ಮತ್ತು ಪ್ರತಿಭೆಯನ್ನು ಸಮಾಜದ ಹಿತಕ್ಕಾಗಿ ಬಳಸಿದರೆ ನಮ್ಮ ರಾಜ್ಯ ಹಾಗೂ ರಾಷ್ಟ್ರ ಇನ್ನಷ್ಟು ಪ್ರಗತಿ ಸಾಧಿಸುತ್ತದೆ. ಕಿಸಾನ್ ಸಭಾ ಟ್ರಸ್ಟ್ ಇನ್ನೂ ಅನೇಕ ವರ್ಷ ಕಾಲ ಇದೇ ರೀತಿಯ ಸೇವಾ ಕಾರ್ಯಗಳನ್ನು ಮುಂದುವರಿಸಿ, ಸಮಾಜಕ್ಕೆ ಬೆಳಕು ನೀಡಲಿ ಎಂದು ಹಾರೈಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ಎಚ್.ಸಿ.ಮಹಾದೇವಪ್ಪ ಮತ್ತುವಮಧು ಬಂಗಾರಪ್ಪ, ಶಾಸಕರಾದ ಸುನಿಲ್ ಕುಮಾರ್ ಮತ್ತು ಗುರ್ಮೆ ಸುರೇಶ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜ, ಎಸ್. ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ವಿನಯ ಕುಮಾರ್ ಸೊರಕೆ ಮತ್ತು ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಮುಖಂಡರಾದ ಉದಯಕುಮಾರ್ ಶೆಟ್ಟಿ ಮುನಿಯಾಲು, ಮಂಜುನಾಥ ಪೂಜಾರಿ, ಎಂ.ಎ.ಗಫೂರ್, ಅಶೋಕ್ ಕುಮಾರ್ ಕೊಡವೂರು,ಕಿಸಾನ್ ಸಭಾ ಅಧ್ಯಕ್ಷ ಹರ್ಷ ಮೊಯ್ಲಿ ಮೊದಲಾದವರಿದ್ದರು.
ಗೃಹಲಕ್ಷ್ಮಿಗಾಗಿ ಮನೆ ಮನೆ ಭೇಟಿ
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸೀಟೂ ಗೆದ್ದಿಲ್ಲ. ಆದರೆ, ಜಿಲ್ಲೆಯಲ್ಲಿ ಅತಿ ಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಕಾರ್ಕಳ ಕ್ಷೇತ್ರಾದ್ಯಂತ ಉದಯ ಕುಮಾರ್ ಶೆಟ್ಟಿ ಮನೆ ಮನೆಗೆ ತಿರುಗಿ ಗೃಹಲಕ್ಷ್ಮಿ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಿದ್ದಾರೆ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದರು.