ಎನ್.ಸಿಐಎಸ್ಎಮ್ ವ್ಯಾಪ್ತಿಗೆ ನ್ಯಾಚುರೋಪಥಿ-ಯೋಗ ಸೇರಿಸಿ

ಲೋಕಬಂಧು ನ್ಯೂಸ್, ಉಡುಪಿ
ಪ್ರಕೃತಿ ಚಿಕಿತ್ಸೆ (ನ್ಯಾಚುರೋಪಥಿ) ಮತ್ತು ಯೋಗ ಚಿಕಿತ್ಸಾ ಪದ್ಧತಿಯನ್ನು ನ್ಯಾಷನಲ್ ಕಮೀಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್ (ಎನ್.ಸಿಐಎಸ್ಎಂ) ವ್ಯಾಪ್ತಿಗೊಳಪಡಿಸಿ ಶಿಕ್ಷಣ ಹಾಗೂ ಕ್ಲಿನಿಕಲ್ ಅಭ್ಯಾಸಕ್ಕೆ ರಾಷ್ಟ್ರ ಮಟ್ಟದ ನಿಯಂತ್ರಣ ವ್ಯವಸ್ಥೆ ಜಾರಿ ಮಾಡುವಂತೆ ಕೇಂದ್ರ ಆಯುಷ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ರಾಜ್ಯ ಸಚಿವ ಪ್ರತಾಪ್ ರಾವ್ ಜಿ. ಜಾದವ್ ಅವರಿಗೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.ಭಾರತೀಯ ನ್ಯಾಚುರೋಪಥಿ ಮತ್ತು ಯೋಗ ಪದವೀಧರ ವೈದ್ಯಕೀಯ ಸಂಘ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ.


ಪ್ರಸ್ತುತ ದೇಶದ 22 ರಾಜ್ಯಗಳಲ್ಲಿ ಬಿಎನ್.ವೈಎಸ್ ಪದವೀಧರರಿಗೆ ವೈದ್ಯಕೀಯ ನೋಂದಣಿ ದೊರೆಯುತ್ತಿದ್ದು, 92 ಯೋಗ ಮತ್ತು ನ್ಯಾಚುರೋಪಥಿ ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ನ್ಯಾಚುರೋಪಥಿ ಮತ್ತು ಯೋಗವನ್ನು ಎನ್.ಸಿಐಎಸ್ಎಮ್ ವ್ಯಾಪ್ತಿಗೆ ಸೇರಿಸುವುದರಿಂದ ದೇಶಾದ್ಯಂತ ಏಕರೂಪ ಶಿಕ್ಷಣ ಮಾನದಂಡ ಜಾರಿಗೆ ಬರುವ ಜೊತೆಗೆ ಬಿ.ಎನ್.ವೈ.ಎಸ್. ಪದವೀಧರರಿಗೆ ರಾಷ್ಟ್ರ ಮಟ್ಟದ ವೈದ್ಯಕೀಯ ನೋಂದಣಿ ದೊರೆಯಲಿದೆ. ಜೊತೆಗೆ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪಥಿ ಹಾಗೂ ಸೋವಾ-ರಿಗ್ಪಾ ಪದ್ಧತಿಗಳ ಸಮಾನ ಸ್ಥಾನಮಾನವೂ ಲಭಿಸಲಿದೆ ಎಂದು ಸಂಸದ ಕೋಟ ಮನವಿ ಮಾಡಿದ್ದಾರೆ.