ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕೃಷ್ಣಮೂರ್ತಿ ಕವತ್ತಾರ್

ಲೋಕಬಂಧು ನ್ಯೂಸ್, ಮೂಲ್ಕಿ
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ
ಆಯೋಜಿಸುವ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ತಿಳಿಸಿದ್ದಾರೆ.ನೀನಾಸಂ ಸಂಸ್ಥೆಯಲ್ಲಿ ರಂಗ ಪದವಿ ಮುಗಿಸಿದ ಬಳಿಕ ಮೂರು ದಶಕಗಳಿಂದ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೆ, ಮೂನ್ನೂರಕ್ಕೂ ಹೆಚ್ಚು ತುಳು- ಕನ್ನಡ ನಾಟಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಲೋಕ ಶಾಕುಂತಲ, ಶಸ್ತ್ರಪರ್ವ, ಹಯವದನ, ಧರ್ಮೆತ್ತಿಮಾಯೆ, ಪಿಲಿಪತ್ತಿ ಗಡಸ್, ಅವ್ವಾ, ಗೌಡರ ಮಲ್ಲಿ ಹೀಗೆ ಅನೇಕ ನಾಟಕಗಳು, ಕಥನ ಕವನಗಳನ್ನು ರಂಗದಲ್ಲಿ ಮೂಡಿಸಿದ್ದಾರೆ. ಅನೇಕ ರಂಗಗೀತೆಗಳನ್ನು ರಚಿಸಿದ್ದಾರೆ. ಸಂಗೀತ ನಿರ್ದೇಶನ
ಮಾಡಿದ್ದಾರೆ.


'ಸಾಯುವವನೇ ಚಿರಂಜೀವಿ' ಏಕವ್ಯಕ್ತಿ ನಾಟಕ 100ಕ್ಕೂ ಹೆಚ್ಚು ಪ್ರಯೋಗ
ಕಂಡಿದೆ. ನಾಡಿನ ಖ್ಯಾತ ನಟ- ನಟಿಯರಿಗೆ ಏಕವ್ಯಕ್ತಿ ನಾಟಕಗಳನ್ನು ನಿರ್ದೇಶಿಸಿದ್ದಾರೆ.


ಮುದ್ರಾಡಿ, ಮಲ್ಲಾಡಿಹಳ್ಳಿ, ಚಿತ್ರದುರ್ಗ,
ಕುಕ್ಕೆಸುಬ್ರಹ್ಮಣ್ಯ ಹೀಗೆ ನಾಡಿನಾದ್ಯಂತ ರಂಗಭೂಮಿಯ ಬೆಳವಣಿಗೆಗೆ ಸಹಕರಿಸಿದ್ದಾರೆ. 50ಕ್ಕೂ ಹೆಚ್ಚು ಕಾಲೇಜುಗಳಲ್ಲಿ ರಂಗ ತರಬೇತಿ ನೀಡಿದ್ದು, ಮೂವತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ರಂಗದ ಮೇಲೆ ತಂದಿದ್ದಾರೆ.


ಮನ್ವಂತರ, ಅಶ್ವಿನಿ ನಕ್ಷತ್ರ, ಗಾಂಧಾರಿ, ಪಲ್ಲವಿ ಅನುಪಲ್ಲವಿ, ನಾ ನಿನ್ನ ಬಿಡಲಾರೆ, ಭಾರತಿ ಹೀಗೆ ಇಪ್ಪತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬೇರು,ಆವೇಶದಂಥ ಅನೇಕ ನಾಟಕಗಳನ್ನು ಆಕಾಶವಾಣಿಗೆ ಬರೆದು, ನಿರ್ದೇಶಿಸಿದ್ದಾರೆ. ಗೌಡ್ರ ಸೈಕಲ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.


ಕರ್ನಾಟಕ ನಾಟಕ ಅಕಾಡೆಮಿ, ಶಂಕರ್‌ನಾಗ್ ಪ್ರಶಸ್ತಿ, ರಂಗನಿರಂತರ ಮೊದಲಾದ
ಪ್ರಶಸ್ತಿಗಳಿಂದ ಅಲಂಕೃತರು, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿದ್ದರು. ರಂಗಭೂಮಿ ಕುರಿತ ಅವರ ಕೃತಿಯನ್ನು ಡಾ. ಪದ್ಮನಿ ನಾಗರಾಜ್ ರಚಿಸಿದ್ದಾರೆ.


ಮಾ.1ರಂದು ಕಟೀಲಿನ ನಂದಿನೀ ನದಿಯ ಕುದ್ರುವಿನಲ್ಲಿ ದೇಗುಲದ ಸಹಕಾರದಲ್ಲಿ
ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಡಾ. ಎಂ.ಪಿ.ಶ್ರೀನಾಥ್ ತಿಳಿಸಿದ್ದಾರೆ.