ಭ್ರಷ್ಟಾಚಾರದ ಆಮೂಲಾಗ್ರ ನಿರ್ಮೂಲನೆಗೆ ಲೋಕಾಯುಕ್ತ ಬದ್ಧ

ಲೋಕಬಂಧು ನ್ಯೂಸ್, ಉಡುಪಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿದೊಡ್ಡ ಪಿಡುಗಾಗಿರುವ ಭ್ರಷ್ಟಾಚಾರವನ್ನು ಬುಡಸಮೇತ ನಿರ್ಮೂಲನೆ ಮಾಡಲು ಲೋಕಾಯುಕ್ತ ಸಂಸ್ಥೆ ಸದಾ ಬದ್ಧವಾಗಿದ್ದು, ಎಲ್ಲಾ ಅಧಿಕಾರಿಗಳು ಕರ್ತವ್ಯವೇ ದೇವರು ಎಂಬ ಸೇವಾ ಮನೋಭಾವದೊಂದಿಗೆ ವರ್ತಿಸುವ ಮೂಲಕ ಭ್ರಷ್ಟಾಚಾರವನ್ನು ನಿರ್ನಾಮ ಮಾಡಲು ಸಂಕಲ್ಪ ಮಾಡಬೇಕು ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಹೇಳಿದರು.ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿದಂತೆ ಬಾಕಿ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಗುರುವಾರ ಉದ್ಘಾಟಿಸಿ ಮಾತನಾಡಿದರು.


ನಮಗೆ ಸ್ವಾತಂತ್ರ್ಯ ಬಂದು ಸುಮಾರು ಎಂಟು ದಶಕಗಳಾದರೂ ಪ್ರಜಾಪ್ರಭುತ್ವ ದೇಶವಾದ ಭಾರತದ ನ್ಯಾಯದಾನ ವ್ಯವಸ್ಥೆ ಹಾಗೂ ಲೋಕಾಯುಕ್ತ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯವಾಗುತ್ತಿಲ್ಲ. ನಮ್ಮೆಲ್ಲರಿಗೂ ನೀಡಲಾದ ಶಾಸನಬದ್ಧ ಹಕ್ಕು ಮತ್ತು ಕರ್ತವ್ಯಗಳನ್ನು ಧೈರ್ಯದಿಂದ ಕೇಳಿ ಪಡೆದುಕೊಳ್ಳಬೇಕು. ಒಂದೊಮ್ಮೆ ನ್ಯಾಯ ಪಡೆಯಲು ಹೋರಾಟ ಮಾಡದಿದ್ದರೆ ಅದು ಅಕ್ಷಮ್ಯ ಅಪರಾಧ ಎಂದರು.


ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಗೆ ನಿಯಮಾನುಸಾರ  ಸಕಾಲದಲ್ಲಿ ಸರ್ಕಾರಿ ಸೌಲಭ್ಯ ಒದಗಿಸುವುದರೊಂದಿಗೆ ಪದೇ ಪದೇ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬೇಕು. ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅಧಿಕಾರಿಗಳೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು. ಚುನಾವಣೆ ಸಮಯದಲ್ಲಿ ಜನರು ಯಾವುದೇ ಆಮಿಷಗಳಿಗೆ  ಒಳಗಾಗದೇ ಮತ ಚಲಾಯಿಸಬೇಕು ಎಂದರು.


ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂದಿದೆ. ಜಿಲ್ಲೆಯ ಅಧಿಕಾರಿಗಳು ಯಾವುದೇ ಕಪ್ಪುಚುಕ್ಕೆ ಇಲ್ಲದೆ ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ನೀಡುವಂತಾಗಬೇಕು. ಆಗ ಮಾತ್ರ ಕೆಲಸದಲ್ಲಿ ಸಾರ್ಥಕತೆ ಹೊಂದಲು ಸಾಧ್ಯ. ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರ ಅಂತ್ಯ ಕಾಣಬೇಕು ಎಂದು ಆಶಿಸಿದರು.


ಈಗಾಗಲೇ ರಾಜ್ಯದ ಪ್ರತಿಯೊಂದೂ ಜಿಲ್ಲೆಗಳಿಗೂ ಭೇಟಿ ನೀಡಿ, ಅಲ್ಲಿರುವ ಲೋಕಾಯುಕ್ತ ಸಂಸ್ಥೆಗೆ ನೀಡಲಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು, ಉಡುಪಿ ಜಿಲ್ಲೆಯ 150 ಬಾಕಿ ಪ್ರಕರಣಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಅವುಗಳನ್ನು ಪೂರ್ಣಗೊಳಿಸಲು ಸಹಕಾರ ನೀಡಬೇಕು. ಒಂದೊಮ್ಮೆ ಸುಳ್ಳು ಪ್ರಕರಣಗಳನ್ನು ಸಾರ್ವಜನಿಕರು ನೀಡಿದ್ದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಿ ಮೂರು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಗಂಗಣ್ಣವರ್, ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಸಂಭವಿಸಬಹುದಾದ  ನ್ಯೂನತೆಗಳನ್ನು ಮೀರಿ ಕಾರ್ಯತತ್ಪರತೆಯಲ್ಲಿ ಹೊಸ ದೃಷ್ಟಿಕೋನ ಅಳವಡಿಸಿಕೊಂಡು ಕಾರ್ಯನಿರ್ವಹಿಸಬೇಕು. ಲೋಕದ ಹಿತದೃಷ್ಟಿಯಲ್ಲಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟು ಯಶಸ್ಸು ಕಾಣಬೇಕು. ಅಧಿಕಾರಿಗಳಿಗೆ ಈವರೆಗೂ ತಮ್ಮ ವಿರುದ್ಧ ಕೇಳಿ ಬಂದ ದೂರುಗಳು ಹಾಗೂ ಪತ್ರ ಮುಖೇನ ಬರುವ ಅಸಮಾನತೆಯ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಇಂದಿನ ಸಭೆ ಉತ್ತಮ ಮಾರ್ಗವಾಗಲಿದೆ ಎಂದರು.


ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ವಾಗತಿಸಿ, ಉಡುಪಿ ಜಿಲ್ಲೆ ಸಾರ್ವಜನಿಕರ ಅರ್ಜಿಗಳಿಗೆ ನಿಗದಿತ ಕಾಲಾವಧಿಯಲ್ಲಿ ಇತ್ಯರ್ಥಪಡಿಸುವ ಕಾರ್ಯದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಶಿಕ್ಷಣದಲ್ಲಿ ಎರಡನೇ ಸ್ಥಾನ ಪಡೆದಿದೆ. ಜಿಲ್ಲೆಯ ನ್ಯಾಯಾಲಯದಲ್ಲಿನ ಪ್ರಕರಣಗಳೂ ಇತರ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ತುಂಬಾ ಕಡಿಮೆ ಪ್ರಮಾಣದಲ್ಲಿ ವೆ. ಜನರು ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೆಕು ಎಂದರು.


ಕರ್ನಾಟಕ ಲೋಕಾಯುಕ್ತ ಉಪ ನಿಬಂಧಕ ವಿಚಾರಣೆ-1 ಅರವಿಂದ್ ಎನ್.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ.ದಿನೇಶ್ ಕುಮಾರ್, ಡಿ.ಎಫ್.ಓ ರುಥ್ರೇನ್ ಪಿ, ವೈಲ್ಡ್ ಲೈಫ್ ಡಿ.ಎಫ್.ಓ ಶಿವರಾಮ್ ಎಂ. ಬಾಬು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.


ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿ, ಹಿರಿಯ ಸಿವಿಲ್ ನ್ಯಾಯಾಧೀಶ ಮನು ಪಟೇಲ್ ಬಿ.ವೈ. ವಂದಿಸಿದರು.ಬಾಕಿ ಇರುವ ಪ್ರಕರಣಗಳ ವಿಲೇವಾರಿ ಸಭೆಯಲ್ಲಿ ಬನ್ನಂಜೆ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ, ರಾಜ್ಯ ಮಹಿಳಾ ನಿಲಯದಲ್ಲಿನ ಅವಕಾಶ ವಂಚಿತರಿಗೆ ಮೂಲಭೂತ ಸೌಕರ್ಯ ಮತ್ತು ಅವರು ತಯಾರಿಸುವ ಉತ್ಪನ್ನಗಳ ಬೆಲೆಯ ವ್ಯತ್ಯಯ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಕಚೇರಿಯ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ, ಚಿತ್ರಪಾಡಿ ಶಾಲೆಯ ಅಡುಗೆ ಕೋಣೆ ಹಾಗೂ ಶೌಚಾಲಯಗಳ ನ್ಯೂನ್ಯತೆ, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ದೂರುಗಳ ವಿಚಾರಣೆ ನಡೆಸಿ ಅವುಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಿರುವ ಬಗ್ಗೆ ಲೋಕಾಯುಕ್ತ ಅಧೀಕ್ಷಕರ ವರದಿಯನ್ನಾಧರಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಲಾಯಿತು.

'ಪೊಲೀಸ್ ಮಿರರ್' ವಾರಪತ್ರಿಕೆಯಲ್ಲಿ ಆರ್.ಟಿ.ಓ ಮತ್ತು ಉಪ ನೋಂದಣಾಧಿಕಾರಿ ವಿರುದ್ಧ ಭ್ರಷ್ಟಾಚಾರದ ಕುರಿತ ದೂರು, ಹಿರಿಯ ಉಪ ನೋಂದಣಾಧಿಕಾರಿ ಮತ್ತು ವಿವಾಹ ನೋಂದಣಾಧಿಕಾರಿ ಭ್ರಷ್ಟಾಚಾರ ಕುರಿತು ದೂರುದಾರರು ಹಾಜರಿರದ ಕಾರಣ ವಿಚಾರಣೆ ಮುಂದೂಡಲಾಯಿತು.


ಜಿಲ್ಲೆಯ ನಿವೃತ್ತ ಯೋಧರು, ಹುತಾತ್ಮ ಯೋಧರ ಅವಲಂಬಿತರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಅವಲಂಬಿತರಿಗೆ ದೊರೆಯಬೇಕಾದ ನಿವೇಶನ ನಿಗದಿತ ಸಮಯದಲ್ಲಿ ನೀಡದಿರುವ ಬಗ್ಗೆ ದೂರು ಪರಿಶೀಲಿಸಿ, ವಿಳಂಬವಿಲ್ಲದೇ ನಿಯಮಾನುಸಾರ ನಿವೇಶನ ನೀಡುವಂತೆ ಉಪ ವಿಭಾಗಾಧಿಕಾರಿಗೆ ಉಪ ಲೋಕಾಯುಕ್ತ ನ್ಯಾ. ಬಿ.ವೀರಪ್ಪ ಸೂಚಿಸಿದರು. ‎