ಲೋಕಬಂಧು ನ್ಯೂಸ್, ಉಡುಪಿ
ಕೇಂದ್ರ ಕೈಗಾರಿಕಾ ಭದ್ರತಾ ಪಡೆ ವತಿಯಿಂದ ಈ ತಿಂಗಳ 18ರಂದು ಜಿಲ್ಲೆಯಲ್ಲಿ ವಂದೇ ಮಾತರಂ ಕೋಸ್ಟಲ್ ಸೈಕ್ಲೊಥಾನ್ ರ್ಯಾಲಿ ಸಂಚರಿಸಲಿದ್ದು, ಅದನ್ನು ಯಶಸ್ವಿಗೊಳಿಸಲು ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಸೂಚನೆ ನೀಡಿದರು.ಮಂಗಳವಾರ ಮಣಿಪಾಲ ರಜತಾದ್ರಿ ಕಚೇರಿಯಲ್ಲಿ ಸಿ.ಐ.ಎಸ್.ಎಫ್ ವಂದೇ ಮಾತರಂ ಕೋಸ್ಟಲ್ ಸೈಕ್ಲೊಥಾನ್ ಕಾರ್ಯಕ್ರಮ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಂದೇ ಮಾತರಂ ಗೀತೆ 150 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿ.ಐ.ಎಸ್.ಎಫ್) ವತಿಯಿಂದ ವಂದೇ ಮಾತರಂ ಕೋಸ್ಟಲ್ ಸೈಕ್ಲೊಥಾನ್ ಹಮ್ಮಿಕೊಳ್ಳಲಾಗಿದ್ದು, ದೇಶದ ಪಶ್ಚಿಮ ಸಮುದ್ರ ತೀರದಲ್ಲಿ ಕರಾವಳಿ ಸಮುದಾಯಗಳು, ಸಂಸ್ಕೃತಿ ಮತ್ತು ರಾಷ್ಟ್ರೀಯ ಸಂಕಲ್ಪವನ್ನು ಒಟ್ಟುಗೂಡಿಸುವ ಉದ್ದೇಶದಿಂದ ಕೋಸ್ಟಲ್ ಸೈಕ್ಲೊಥಾನ್ ಆಯೋಜಿಸಲಾಗಿದೆ. ರ್ಯಾಲಿಗೆ ಈಗಾಗಲೇ ಜನವರಿಯಲ್ಲಿ ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಗಿದೆ. ರ್ಯಾಲಿ ಸುಮಾರು 6,500 ಕಿ.ಮೀ. ಸಂಚರಿಸಿ, ಕೇರಳದ ಕೊಚ್ಚಿಯಲ್ಲಿ ಫೆ.21ರಂದು ಕೊನೆಗೊಳ್ಳಲಿದೆ.
ಜಿಲ್ಲೆಯಲ್ಲಿ ಬೈಂದೂರು ತಾಲೂಕಿನ ಶಿರೂರಿನಿಂದ ರ್ಯಾಲಿ ಪ್ರಾರಂಭವಾಗಿ ಕುಂದಾಪುರ-ಬ್ರಹ್ಮಾವರ-ಉಡುಪಿ- ಕಾಪು- ಹೆಜಮಾಡಿ ಮೂಲಕ ಸಂಚರಿಸಿ ಮುಂದೆ ಹಾದುಹೋಗಲಿದೆ. ಸಾರ್ವಜನಿಕರು ಮತ್ತು ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ರ್ಯಾಲಿ ಯಶಸ್ವಿಗೊಳಿಸಬೇಕು ಎಂದರು.
ಸೈಕ್ಲೋಥಾನ್ ರ್ಯಾಲಿ ಸ್ಪರ್ಧಾಳುಗಳನ್ನು ಸ್ಥಳೀಯ ಸಂಪ್ರದಾಯದೊಂದಿಗೆ ಅಂದು ಬೆಳಗ್ಗೆ 8.30ಕ್ಕೆ ತ್ರಾಸಿಯಲ್ಲಿ ಸ್ವಾಗತಿಸಲಿದ್ದು, ಅಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಗೂ ಸಮುದಾಯದ ಜನರೊಂದಿಗೆ ಸಂವಾದ ನಡೆಯಲಿದೆ.
ಬೆಳಗ್ಗೆ 11.30ಕ್ಕೆ ಬ್ರಹ್ಮಾವರದ ಆಶ್ರಯ ಹೋಟೆಲ್ ಸಭಾಂಗಣದಲ್ಲಿ ಹಾಗೂ ಸಂಜೆ 3.30ಕ್ಕೆ ಕಾಪು ಸರಕಾರಿ ಕಾಲೇಜು ಸಭಾಂಗಣದಲ್ಲಿ ಸಮುದಾಯದ ಜನರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿದೆ.
ರ್ಯಾಲಿ ಸುಗಮವಾಗಿ ಸಾಗಲು, ಸೈಕ್ಲಿಸ್ಟ್'ಗಳು ಮತ್ತು ಅವರ ಸಿಬ್ಬಂದಿಗೆ ಸುರಕ್ಷತೆ ಒದಗಿಸಲು ಹಾಗೂ ಪ್ರಯಾಣಿಕರ ಸುಗಮ ಸಂಚಾರಕ್ಕೆ ಯಾವುದೇ ಅನನುಕೂಲ ಉಂಟಾಗದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರ್ಯಾಲಿ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗಳನ್ನು ಒಳಗೊಂಡ ಆಂಬುಲೆನ್ಸ್'ನ್ನು ಸ್ಥಳದಲ್ಲಿ ನಿಯೋಜಿಸಬೇಕು ಎಂದರು.
ಸಭೆಯಲ್ಲಿ ಎನ್.ಎಂ.ಪಿ.ಎ ಮಂಗಳೂರು ಸೆಂಟ್ರಲ್ ಇಂಡಸ್ಟ್ರಿಯಲ್ ಪೊರ್ಸ್ನ'ನ ರಾಜೇಂದ್ರ ಪ್ರಸಾದ್ ಪಾಠಕ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.