ಉಡುಪಿ | ಲೋಕಬಂಧು ನ್ಯೂಸ್
ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ, ಒಳಹರಿವು ಬಗ್ಗೆ ಚರ್ಚಿಸಿ, ನಗರದ ಜನತೆಗೆ ನಿರಂತರ ನೀರು ಸರಬರಾಜಿಗೆ ಯಾವುದೇ ಸಮಸ್ಯೆಯಾಗದಂತೆ ಈಗಿನಿಂದಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಶಾಸಕ ಯಶಪಾಲ್ ಸುವರ್ಣ ಸೂಚನೆ ನೀಡಿದರು.
ವಾರಾಹಿ ಯೋಜನೆ ಮೂಲಕವೂ ನಗರಕ್ಕೆ ನೀರು ಸರಬರಾಜಾಗುತ್ತಿದ್ದು, ಬಜೆ ಅಣೆಕಟ್ಟಿನಲ್ಲೂ ನಿರಂತರ ನೀರು ಸರಬರಾಜಿಗೆ ಪೂರಕ ನೀರಿನ ಲಭ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಉನ್ನತಗೊಳಿಸಲಾದ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಕಾರ್ಯ ಚಟುವಟಿಕೆ ಬಗ್ಗೆ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿ, ಘಟಕವನ್ನು ಉತ್ತಮವಾಗಿ ನಿರ್ವಹಿಸಿ ಉಡುಪಿ ಜನತೆಗೆ ನಿರಂತರ ಶುದ್ಧ ಕುಡಿಯುವ ನೀರು ಸರಬರಾಜಿಗೆ ವಿಶೇಷ ಆದ್ಯತೆ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ, ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಸುಮಿತ್ರಾ ನಾಯಕ್, ಗಿರೀಶ್ ಅಂಚನ್, ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ ಗಿರಿಧರ ಆಚಾರ್ಯ, ಸಂತೋಷ್ ಜತ್ತನ್, ಟಿ.ಜಿ. ಹೆಗ್ಡೆ ಮತ್ತು ಮಂಜುನಾಥ ಮಣಿಪಾಲ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾ ಪ್ರಸಾದ್, ವಾರಾಹಿ ಯೋಜನೆಯ ಆರ್ಕಲೇಶ ಗೌಡ ಮೊದಲಾದವರಿದ್ದರು.