ಲೋಕಬಂಧು ನ್ಯೂಸ್, ಕಾರ್ಕಳ:
ವೈಚಾರಿಕ ಮತ್ತು ವೈಜ್ಞಾನಿಕತೆಯ ಶಿಕ್ಷಣ ಇಂದಿನ ಅಗತ್ಯವಾಗಿದ್ದು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಅದರ ಮೂಲ ಉದ್ದೇಶವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಕಿಸಾನ್ ಸಭಾ ಟ್ರಸ್ಟ್‌ನ ಸಭಾಂಗಣ ಉದ್ಘಾಟಿಸಿ, ಟ್ರಸ್ಟ್‌ನ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 35ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಮಾಣಿಕ ರಾಜಕಾರಣಿ
ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಾ ತಾನು ಕುಟುಂಬದ ಮೊದಲ ಪದವಿಧರನಾಗಿದ್ದು, ವೀರಪ್ಪ ಮೊಯ್ಲಿಯವರಂತೆ ತಾನೂ ಕಷ್ಟದ ಜೀವನ ಕಂಡಿರುವುದಾಗಿ ತಿಳಿಸಿದರು. ವೀರಪ್ಪ ಮೊಯ್ಲಿ ಸಮಾಜದ ಬಡ ವರ್ಗದವರ ಪರವಾಗಿ ನಿಂತಿದ್ದರು. ವಕೀಲ ವೃತ್ತಿಯಲ್ಲಿ ಬಡವರಿಗೆ ಉಚಿತವಾಗಿ ವಕಾಲತ್ತು ಮಾಡುತ್ತಿದ್ದು, ತಮ್ಮ ವಕೀಲ ವೃತ್ತಿ ಹಾಗೂ ರಾಜಕೀಯ ಬದುಕಿನಲ್ಲಿ ಪ್ರಾಮಾಣಿಕತೆ ಮೆರೆದಿದ್ದಾರೆ. ಶತಾಯುಷಿಗಳಾಗಿ ಅವರ ಸಮಾಜ ಸೇವೆ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಶಿಕ್ಷಣದಲ್ಲಿ ವೈಚಾರಿಕತೆ ಅಗತ್ಯ
ಕಾರ್ಕಳದಲ್ಲಿ ಕಿಸಾನ್ ಸಭಾ ಪ್ರಾರಂಭಿಸಿ, ನಂತರ ಪ್ರೌಢಶಾಲೆ ಸ್ಥಾಪಿಸಿ, ಅವಕಾಶ ವಂಚಿತ ಹಾಗೂ ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣ ನೀಡುವ ಉತ್ತಮ ಕಾರ್ಯದಲ್ಲಿ ವೀರಪ್ಪ ಮೊಯ್ಲಿ ತೊಡಗಿರುವುದು ಸಂತೋಷದ ವಿಷಯ. ಈ ಶಾಲೆ 35 ವರ್ಷ ಪೂರೈಸಿದ್ದು, ಇನ್ನೂ ಎತ್ತರಕ್ಕೆ ಬೆಳೆಯುವಂತಾಗಲಿ ಹಾಗೂ ಇಲ್ಲಿನ ವಿದ್ಯಾರ್ಥಿಗಳು ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.
ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಶಿಕ್ಷಣದ ಉದ್ದೇಶ. ರಾಜ್ಯದಲ್ಲಿ 12ರಿಂದ 15 ಶೇ.ದಷ್ಟಿದ್ದ ರಸಾಕ್ಷರತೆ ಇಂದು 75 ಶೇ. ಹೆಚ್ಚಿದ್ದರೂ ಶಿಕ್ಷಣದಲ್ಲಿ ವೈಜ್ಞಾನಿಕತೆ ಹಾಗೂ ವೈಚಾರಿಕತೆ ಇಲ್ಲದಿರುವುದನ್ನು ಗಮನಿಸಲಾಗಿದೆ ಎಂದರು.
ಸಮಾನ ಅವಕಾಶ ನೀಡುವುದು ಶಿಕ್ಷಣ ಮೂಲ ಉದ್ದೇಶವಾಗಿರಬೇಕು ಎಂದರು.