ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲದು

ಲೋಕಬಂಧು ನ್ಯೂಸ್, ಉಡುಪಿ
ಸರ್ಕಾರ ಅಥವಾ ಪಕ್ಷ ಯಾವುದೇ ಇರಲಿ, ಜನ ಹಿತಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಬೆಂಬಲಿಸಿ ಅದನ್ನು ಅರ್ಹರಿಗೆ ತಲುಪಿಸುವಲ್ಲಿ ಎಲ್ಲ ರಾಜಕಾರಣಿಗಳೂ ಸಹಕರಿಸಬೇಕು. ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಅಭಿವೃದ್ಧಿ ವಿಚಾರದಲ್ಲಿ ಒಂದಾಗಿ ವರ್ತಿಸಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಿಸಿದರು.ಭಾರತ ಸರ್ಕಾರದ ವಾರ್ತಾ ಇಲಾಖೆ (ಪಿಐಬಿ) ಬೆಂಗಳೂರು ಶಾಖೆ ಆಶ್ರಯದಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಕಾರ್ಯಾಗಾರ 'ವಾರ್ತಾಲಾಪ' ಉದ್ಘಾಟಿಸಿ ಮಾತನಾಡಿದರು.


ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿತಾಸಕ್ತಿಗಿಂತ ಜನರ ಹಿತವೇ ಮುಖ್ಯ. ಕೇಂದ್ರ ಮತ್ತು ರಾಜ್ಯಗಳಲ್ಲಿ ಪರಸ್ಪರ ಭಿನ್ನ ಪಕ್ಷಗಳ ಸರ್ಕಾರಗಳಿದ್ದರೂ ಜನರ ಹಿತಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಬೆಂಬಲಿಸುವುದು ಮುಖ್ಯ. ಆದರೆ, ಯೋಜನೆಯಲ್ಲಿರುವ ಲೋಪದೋಷಗಳ ಬಗ್ಗೆ ಚರ್ಚಿಸುವುದು ತಪ್ಪಲ್ಲ ಎಂದರು.


ಸ್ವಾತಂತ್ರ್ಯಾನಂತರದ ದಿನಗಳಿಗೂ ಪ್ರಸ್ತುತ ದಿನಗಳಿಗೂ ಹೋಲಿಸಿದಲ್ಲಿ ಈಗ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಅದಕ್ಕೆ ಎಲ್ಲ ಸರ್ಕಾರಗಳೂ ಕಾರಣ. ಭಾಗ್ಯಜ್ಯೋತಿ, ಭಾಗ್ಯಲಕ್ಷ್ಮಿ, ಶೌಚಾಲಯ ಸ್ಥಾಪನೆಗೆ ಅನುದಾನ ಇತ್ಯಾದಿ ಕಾರ್ಯಕ್ರಮಗಳಿಂದ ಜನಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದರು.


ಈ ಹಿಂದಿನ ಮಹಾತ್ಮ ಗಾಂಧಿ ಮನರೇಗ ಯೋಜನೆಯಲ್ಲಿ 22.5 ಸಾವಿರ ಕೋಟಿ ರೂ. ಅವ್ಯವಹಾರ ನಡೆದ ಪರಿಣಾಮ ಆ ಯೋಜನೆಯನ್ನು ವಿಬಿ ಜಿ ರಾಮ್ ಜಿ ಯೋಜನೆಯನ್ನಾಗಿ ಬದಲಿಸಬೇಕಾಯಿತು. ಪ್ರಸ್ತಾವಿತ ಹೊಸ ಯೋಜನೆಯಲ್ಲಿ ಉದ್ಯೋಗ ದಿನಗಳು, ಯೋಜನೆಗಳ ಅನುಷ್ಠಾನ ಇತ್ಯಾದಿ ಹೊಸ ರೂಪುರೇಷೆಗಳೊಂದಿಗೆ ವಿಕಸಿತ ಭಾರತದ ಪರಿಕಲ್ಪನೆ ಹೊಂದಲಾಗಿದೆ. ಉದ್ದೇಶಿತ ಯೋಜನೆಯನ್ನು ರಾಜಕೀಯ ದೃಷ್ಟಿಯನ್ನಿಟ್ಟುಕೊಂಡು ಸಾರಾಸಗಟಾಗಿ ವಿರೋಧಿಸುವುದಕ್ಕಿಂತ ಅದರಲ್ಲಿ ಲೋಪದೋಷಗಳಿದ್ದಲ್ಲಿ ಸರಿಪಡಿಸಲು ಸಲಹೆ ನೀಡುವುದು ಸೂಕ್ತ ಎಂದರು.


ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಜಿ.ಪಂ. ಸಿಇಓ ಪ್ರತೀಕ್ ಆಯಲ್, ವಾರ್ತಾಧಿಕಾರಿ ಮಂಜುನಾಥ ಬಿ., ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಭಟ್ ಕುರ್ಯ ಮೊದಲಾದವರಿದ್ದರು.


ಪಿಐಬಿ ಸಹಾಯಕ ನಿರ್ದೇಶಕ ಮಧು ಸ್ವಾಗತಿಸಿದರು. ನಿತೀಶ್ ನಿರೂಪಿಸಿ, ವಂದಿಸಿದರು.


ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಉಡುಪಿ ಜಿ.ಪಂ. ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ವಿಜಯ ಶ್ಯಾಮ್, ನೂತನ ಕಾರ್ಮಿಕ ಕಾನೂನುಗಳ ಬಗ್ಗೆ ಮಂಗಳೂರು ಇಎಸ್ಐಸಿ ಉಪ ಪ್ರಾದೇಶಿಕ ನಿರ್ದೇಶಕ ವಿಜಯ್ ಆನಂದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಡಾ. ಪ್ರಶಾಂತ ಭಟ್, ಮೆಸ್ಕಾಂ ಉಡುಪಿ ಅಧೀಕ್ಷಕ ನರಸಿಂಹ ಸೂರ್ಯಘರ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.


ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ನಾಯ್ಕ್ ಇದ್ದರು.