ಪುತ್ತೂರು ಮಧ್ವಮೂರ್ತಿ ನಿಧನ

ಉಡುಪಿ | ಲೋಕಬಂಧು ನ್ಯೂಸ್
ಇಲ್ಲಿನ ಪುತ್ತೂರಿನ ಧಾನ್ಯಲಕ್ಷ್ಮೀ ರೈಸ್ ಮಿಲ್ ಉದ್ಯಮಿ ಮಧ್ವಮೂರ್ತಿ ಆಚಾರ್ಯ (62) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.
ಪ್ರತಿಭಾವಂತರಾಗಿದ್ದ ಅವರು ನಿಟ್ಟೂರು ಪ್ರೌಢಶಾಲೆಯ ಪೂರ್ವವಿದ್ಯಾರ್ಥಿ.


ಎಳವೆಯಲ್ಲಿ ಮರದಿಂದ ಬಿದ್ದು ಬೆನ್ನುಹುರಿಯ ವೈಕಲ್ಯದಿಂದ ನಡೆಯಲಾಗದಿದ್ದರೂ ತಂದೆ ಸ್ಥಾಪಿಸಿದ ಅಕ್ಕಿ ಗಿರಣಿಯನ್ನು ಸಹೋದರನ ಜೊತೆಯಾಗಿ ಮುನ್ನಡೆಸಿ ಪ್ರತಿಷ್ಠಿತ ಉದ್ಯಮಿಯಾಗಿ ಸಾಧನೆಗೈದಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಭತ್ತದ ಕೃಷಿ ಮಾಡುವವರಿಗೆ ವಿಶೇಷ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಾ ಬಂದಿದ್ದರು.


ನಿಟ್ಟೂರು ಪ್ರೌಢಶಾಲೆ `ನಿಟ್ಟೂರು ಸ್ವರ್ಣ' ಅಭಿಯಾನ ಆರಂಭಿಸಿದಾಗ ಮತ್ತು ಅದರ ಪ್ರೇರಣೆಯಿಂದ ಮಾಜಿ ಶಾಸಕ ಕೆ. ರಘುಪತಿ ಭಟ್  ಕೇದಾರೋತ್ಥಾನ ಟ್ರಸ್ಟ್ ಸ್ಥಾಪಿಸಿದ ಸಂದರ್ಭದಲ್ಲಿ ಹತ್ತಾರು ಟನ್ ಭತ್ತವನ್ನು ಅಕ್ಕಿ ಮಾಡಿ ಈ ಮಹಾಭಿಯಾನ ಯಶಸ್ವಿಯಾಗುವಲ್ಲಿ ಸಹಕರಿಸಿದ್ದರು.


ಅವಿವಾಹಿತರಾಗಿದ್ದ ಅವರಿಗೆ ತಾಯಿ, ಸಹೋದರ, ಸಹೋದರಿಯರಿದ್ದಾರೆ.


ಕಲಾಪ್ರೇಮಿಯಾಗಿದ್ದ ಅವರು ಯಕ್ಷಗಾನ ಕಲಾರಂಗದ ಪೋಷಕ ಸದಸ್ಯರಾಗಿದ್ದರು. ಅವರ ನಿಧನಕ್ಕೆ ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.