ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣದ ಅರಿವು ಮೂಡಿಸಿ

ಲೋಕಬಂಧು ನ್ಯೂಸ್, ಉಡುಪಿ
ಜನಸಾಮಾನ್ಯರಿಗೆ ಆರೋಗ್ಯ ಶಿಕ್ಷಣದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು. ರೋಗಕ್ಕೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಯಾವುದೇ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯಕೀಯ ನೆರವು ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸರಕಾರ ಜನಸಾಮಾನ್ಯರಿಗೆ ಉತ್ತಮ ಅರೋಗ್ಯ ಸೇವೆ ಒದಗಿಸುವ ಆಶಯದಿಂದ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಅಗತ್ಯ ಇರುವವರಿಗೆ ಆವಶ್ಯಕತೆಗನುಗುಣವಾಗಿ ತಲುಪಿಸುವ ಕೆಲಸವಾಗಬೇಕು ಎಂದರು.


ಜಿಲ್ಲೆಯಲ್ಲಿ ಪ್ರತಿಯೊಬ್ಬ ಗರ್ಭಿಣಿಯರಿಗೆ ತಾಯಿಕಾರ್ಡ್ ನೀಡಬೇಕು. ಅವರಿಗೆ ಆರೋಗ್ಯ ಶಿಕ್ಷಣ ನೀಡುವ ಜೊತೆಗೆ ಕಾಲ ಕಾಲಕ್ಕೆ ನಿರಂತರ ವೈದ್ಯಕೀಯ ತಪಾಸಣೆ ನಡೆಸಬೇಕು.


ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ನಿಮ್ಮ ಹಂತದಲ್ಲಿಯೇ ಗರ್ಭಿಣಿಯರು ಹಾಗೂ ನವಜಾತ ಶಿಶುಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಜೊತೆಗೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ತಿಳಿಸುವುದರೊಂದಿಗೆ ಜಿಲ್ಲೆಯಲ್ಲಿ ತಾಯಿ ಮರಣ‌ ಸಂಖ್ಯೆಯನ್ನು ಶೂನ್ಯಕ್ಕಿಳಿಸಬೇಕು ಎಂದರು


ಹೆರಿಗೆ ನಂತರವೂ ತಾಯಿ ಮತ್ತು ಮಕ್ಕಳಿಗೆ ಸೂಕ್ತ ಚಿಕಿತ್ಸೆಯ ಆವಶ್ಯಕತೆ ಇದ್ದಲ್ಲಿ ನೀಡಬೇಕು.


ಒಂದೊಮ್ಮೆ ಇತರ ತಜ್ಞರ ಆವಶ್ಯಕತೆ ಇದ್ದಲ್ಲಿ ಅದನ್ನೂ ನೀಡುವಂತೆ ಶಿಫಾರಸು ಮಾಡಿ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳಬೇಕು. ಪ್ರಸ್ತುತ ಕಾರ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಉನ್ನತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಗರ್ಭಿಣಿ ಸಾಬೀಸ್ತಾ ಬಾನು ಎಂಬವರು ಚಿಕಿತ್ಸೆ ಫಲಿಸದೇ ಮೃತಪಟ್ಟ ಪ್ರಕರಣದ ಬಗ್ಗೆ ತನಿಖೆಗೆ ವೈದ್ಯಕೀಯ ಮಂಡಳಿಗೆ ಕಳಿಸಿಕೊಡುವಂತೆ ಸೂಚನೆ ನೀಡಿದರು.


ಮಕ್ಕಳಿಗೆ ನೀಡುವ ರೋಗ ನಿರೋಧಕ ಚುಚ್ಚುಮದ್ದುಗಳನ್ನು ತಪ್ಪದೇ ನೀಡಬೇಕು. ಯಾವುದೇ ಮಗು ಕೂಡಾ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಲಸಿಕೆ ಕಾರ್ಯಕ್ರಮದಲ್ಲಿ ಹೊರಗುಳಿದ ಮಕ್ಕಳಿಗೆ ಮರು ದಿನಾಂಕ ನಿಗದಿಪಡಿಸಿ ಲಸಿಕೆ ನೀಡಲು ಮುಂದಾಗಬೇಕು.


ಜಿಲ್ಲೆಯಲ್ಲಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ಪ್ರತಿಶತ ನೂರರಷ್ಟು ವಿತರಣೆ ಮಾಡಲಾಗಿದೆ ಎಂದರು.



ತುರ್ತು ಪರಿಸ್ಥಿತಿ ಮಧ್ಯಮ ಆರೈಕೆ ಮತ್ತು ಚೇತರಿಕೆ ಕೇಂದ್ರಗಳಲ್ಲಿ ಮಾನಸಿಕ ಅಸ್ವಸ್ಥರು ತಮ್ಮ ಗುರುತು ಕಳೆದುಕೊಂಡು ರಸ್ತೆಯಲ್ಲಿ ಅಲೆದಾಡುತ್ತಿರುವುದು ಕಂಡುಬಂದರೆ ಅವರನ್ನು ಕೇಂದ್ರಕ್ಕೆ ಕರೆದು ತಂದು ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಅವರ ಪೋಷಕರಿಗೆ ತಲುಪಿಸುವಲ್ಲಿ ಸಹಕರಿಸಬೇಕು. ದೂರವಾಣಿ ಸಂಖ್ಯೆ 7795978883 ಬಗ್ಗೆ ಸಾರ್ವಜನಿಕರಿಗೆ ಪ್ರಚಾರ ನೀಡಬೇಕು. ಸಾರ್ವಜನಿಕರು ಇಂಥ ವ್ಯಕ್ತಿಗಳು ಕಂಡುಬಂದಲ್ಲಿ ಈ ಸಂಖ್ಯೆಗೆ ಮಾಹಿತಿ ನೀಡಬೇಕು ಎಂದರು.


ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ., ಕೆಎಂಸಿ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ಶ್ಯಾಮಲಾ, ನವಜಾತ ಶಿಶುತಜ್ಞೆ ಡಾ. ಲೆಸ್ಲಿ ಲೂಯಿಸ್, ತಜ್ಞ ವೈದ್ಯ ಡಾ.ಮುಖ್ಯಪ್ರಾಣ, ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.