ಬಂಜಾರ ಸಮುದಾಯಕ್ಕೆ ಸಂತ ಸೇವಾಲಾಲ ಜ್ಞಾನದ ಬೆಳಕು

ಉಡುಪಿ | ಲೋಕಬಂಧು ನ್ಯೂಸ್
ಬಂಜಾರ ಸಮುದಾಯವನ್ನು ಒಗ್ಗೂಡಿಸಿ ಶಕ್ತಿ ತುಂಬಿ ಆ ಸಮುದಾಯಕ್ಕೆ ಜ್ಞಾನದ ಬೆಳಕನ್ನು ನೀಡಿದವರು ಶ್ರೀ ಸಂತ ಸೇವಾಲಾಲ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣನಗರಿ ಶ್ರೀ ಸಂತ ಸೇವಾಲಾಲ ಬಂಜಾರ ಸಂಘ ಉಡುಪಿ ಜಿಲ್ಲೆ ಸಹಯೋಗದಲ್ಲಿ ಭಾನುವಾರ ನಡೆದ ಶ್ರೀ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಶ್ರೀ ಸಂತ ಸೇವಾಲಾಲ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.


ಸಂತ ಸೇವಲಾರರು ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ವಚನ, ಉಪದೇಶಗಳ ಮೂಲಕ ಸಮಾಜದ ಮೂಢನಂಬಿಕೆಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗಾಗಿ ಅನೇಕ ರೀತಿಯಲ್ಲಿ ಕೊಡುಗೆಗಳನ್ನು ನೀಡಿದರು ಎಂದ ಗಫೂರ್, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾದ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದರು.


ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಭಕ್ತಿಪಂಥ ಕಾಲದಲ್ಲಿ ಸಮಾಜದ ವ್ಯವಸ್ಥೆ ತಿದ್ದಲು ಶ್ರಮಿಸಿದ ಸಂತ ಶ್ರೀ ಸೇವಾಲಾಲರು ಬುಡಕಟ್ಟಿನ ಜನರಲ್ಲಿ ಧೈರ್ಯ ಮತ್ತು  ಆತ್ಮಸ್ಥೈರ್ಯ ಮೂಡಿಸಿದ ಮಹಾನ್ ದಾರ್ಶನಿಕ. ಅವರ ಮಾರ್ಗದರ್ಶನದಂತೆ ಇಂದಿನ ಪೀಳಿಗೆ ಉತ್ತಮ ಶಿಕ್ಷಣ ಪಡೆದು ಸಮಾಜದ ಏಳಿಗೆಗಾಗಿ ಶ್ರಮಿಸುವಂತಾಗಬೇಕು ಎಂದರು.


ಕಳತ್ತೂರು ಪಿ.ಕೆ.ಎಸ್. ಪ್ರೌಢಶಾಲೆಯ ಸಹಶಿಕ್ಷಕ ಸಂತೋಷ್ ಅ. ರಾಠೋಡ ಅವರು ಶ್ರೀ ಸಂತ ಸೇವಾಲಾಲರ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಈ ಸಂದರ್ಭದಲ್ಲಿ ಎಸ್.ಎಸ್ ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ಅಂಜಲಿ ಅವರನ್ನು ಗೌರವಿಸಲಾಯಿತು.


ಉಡುಪಿ ಜಿಲ್ಲಾ ಕೃಷ್ಣನಗರಿ ಶ್ರೀ ಸಂತ ಸೇವಾಲಾಲ ಬಂಜಾರ ಸಂಘದ ಅಧ್ಯಕ್ಷ ಕುಮಾರ್ ಕೆ.ಎಂ. ಇದ್ದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವರ್ಷಾ ಬಿ. ಕೋಟ್ಯಾನ್ ನಿರೂಪಿಸಿದರು. ಕೃಷ್ಣನಗರಿ ಶ್ರೀ ಸಂತ ಸೇವಾಲಾಲ ಬಂಜಾರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಲಮಾಣಿ ವಂದಿಸಿದರು.