ಲೋಕಬಂಧು ನ್ಯೂಸ್, ಕಟೀಲು
ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾ.1ರಂದು ಕಟೀಲಿನ ಕುದ್ರುವಿನಲ್ಲಿ ನಡೆಸುವುದು ಎಂದು ಕಟೀಲು ಸರಸ್ವತೀ ಸದನದಲ್ಲಿ ನಡೆದ ದ.ಕ. ಜಿಲ್ಲಾ ಕಸಾಪ ಮೂಲ್ಕಿ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸಾಹಿತ್ಯಾಭಿಮಾನಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.ಚಿತ್ರಕೂಟದಲ್ಲಿ ನುಡಿಹಬ್ಬ
ತಾಲೂಕು ಮಾತ್ರವಲ್ಲದೆ ಜಿಲ್ಲೆಯ ಖ್ಯಾತ ಹಾಗೂ ಯುವ ಚಿತ್ರ ಕಲಾವಿದರಿಂದ ನಂದಿನೀ ನದಿ, ಕಟೀಲು ಕ್ಷೇತ್ರದ ಪ್ರಕೃತಿಗೆ ಸಂಬಂಧಿಸಿ ವಿವಿಧ ಪ್ರಾಕಾರಗಳಲ್ಲಿ ಚಿತ್ರಗಳನ್ನು ರಚಿಸುವ ಮುಕ್ತ ಅವಕಾಶ ಕಲ್ಪಿಸಲಾಗುವುದು. ಈ ದ್ವೀಪದಲ್ಲಿ ಬ್ರಹ್ಮಕಲಶೋತ್ಸವ ಸಂದರ್ಭ ನಾಗಮಂಡಲ ನಡೆಯುತ್ತದೆ. ಅಲ್ಲಿ ನಾಗಾರಾಧನೆಗೆ ಮಹತ್ವವಿದೆ. ನಾಗಾರಾಧನೆ ಹಾಗೂ
ಚಿತ್ರ ಕಲಾವಿದರಿಂದ ಕಲಾಕೃತಿಗಳನ್ನು ರಚಿಸುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಚಿತ್ರಕೂಟ ಎಂದು ಹೆಸರಿಡಲಾಗಿದೆ.
ಎರಡು ವೇದಿಕೆಗಳಲ್ಲಿ ಸಮ್ಮೇಳನ
ನಂದಿನೀ ನದಿ ಹರಿಯುವ ಕಟೀಲು ದೇಗುಲದ ಕುದ್ರುವಿನಲ್ಲಿ ಪ್ರಕೃತಿಯ ಮಡಿಲಲ್ಲಿ ಎರಡು ಸಮಾನಾಂತರ ವೇದಿಕೆಗಳಲ್ಲಿ ಸಮ್ಮೇಳನ ನಡೆಯಲಿದೆ. ಒಂದು ವೇದಿಕೆಯಲ್ಲಿ ಹಿರಿಯ
ಸಾಹಿತಿಗಳ ನೆನಪು ಕಾರ್ಯಕ್ರಮ, ಇನ್ನೊಂದರಲ್ಲಿ ಕವಿ, ಕಥಾಗೋಷ್ಟಿಗಳು ನಡೆಯಲಿದ್ದು, ತಾಲೂಕಿನ ಯುವ ಸಾಹಿತಿಗಳು, ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ನೀಡಲಾಗುತ್ತದೆ ಎಂದು
ಮೂಲ್ಕಿ ತಾಲೂಕು ಕಸಾಪ ಅಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದರು.
ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಈ ಹಿಂದಿನ ಸಮ್ಮೇಳನಗಳಿಗೆ ಕಟೀಲು ದೇವಸ್ಥಾನ ಊಟೋಪಚಾರದ ವ್ಯವಸ್ಥೆ ಮಾಡಿದೆ. ಇದೀಗ ಕಟೀಲಿನಲ್ಲೇ
ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ದೇಗುಲ ಎಲ್ಲ ರೀತಿಯಲ್ಲಿ ಸಹಕಾರ ನೀಡಲಿದೆ.
ತಾಲೂಕು ಮಾತ್ರವಲ್ಲದೆ ಎಲ್ಲೆಡೆಯ ಕನ್ನಡಾಭಿಮಾನಿಗಳು ಭಾಗವಹಿಸುವಂತೆ ಸಮ್ಮೇಳನ ಸಮಿತಿ ಪ್ರಯತ್ನಿಸಬೇಕು ಎಂದರು.
ಕಸಾಪ ತಾಲೂಕು ಕಾರ್ಯದರ್ಶಿಗಳಾದ ಹೆರಿಕ್ ಪಾಯಸ್, ವೀಣಾ ಶಶಿಧರ್ ಮತ್ತು ಪ್ರಕಾಶ್ ಆಚಾರ್, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಹಿರಿಯ ಸಾಹಿತಿ ಉದಯಕುಮಾರ ಹಬ್ಬು, ಪ್ರಾಚಾರ್ಯರಾದ ಡಾ.ವಿಜಯ್ ವಿ., ಡಾ. ಪುರುಷೋತ್ತಮ ಕೆ.ವಿ., ರಾಜಶೇಖರ್ ಎಸ್., ಮೆಲ್ವಿನ್, ಸುರೇಶ ಭಟ್, ಮಾಧವ ಕೆರೆಕಾಡು, ದಯಾಮಣಿ ಶೆಟ್ಟಿ, ಪಾಂಡುರಂಗ ಭಟ್, ಅಶೋಕ್ ದೇವಾಡಿಗ, ಜಯಂತ
ಸುವರ್ಣ, ದಿನೇಶ್, ದುರ್ಗಾಪ್ರಸಾದ್ ಮೊದಲಾದವರಿದ್ದರು.