ರಾಜ್ಯದಲ್ಲಿ ಮಾದಕ ವಸ್ತುಗಳ ನಿಗ್ರಹಕ್ಕೆ ಚಿಂತನೆ

ಲೋಕಬಂಧು ನ್ಯೂಸ್, ಕಾರ್ಕಳ
ಗಾಂಜಾ ಸೇರಿದಂತೆ ಎಲ್ಲ ವಿಧದ ಮಾದಕ ವಸ್ತುಗಳನ್ನು ನಿಗ್ರಹಿಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ವಿದ್ಯಾರ್ಥಿ ಹತ್ಯೆ ಹಾಗೂ ಅಪ್ರಾಪ್ತರಲ್ಲಿ ಗಾಂಜಾ ಸೇವನೆ ವ್ಯಾಪಕವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.


ಅಜೀಮ್ ಪ್ರೇಮ್ ಜಿ ವಿ.ವಿ‌. ಮೇಲೆ ಎಬಿವಿಪಿ ವಿದ್ಯಾರ್ಥಿಗಳು ದಾಂಧಲೆ ನಡೆಸಿರುವ ಬಗ್ಗೆ ಉತ್ತರಿಸಿ, ಯಾವುದೇ ಸಂಘಟನೆಗಳು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.


ಖಾಲಿ ಹುದ್ದೆ ಭರ್ತಿ
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಉದ್ಯೋಗ ಒದಗಿಸುವ ಭರವಸೆಯನ್ನು ಸರ್ಕಾರ ನೀಡುತ್ತದೆ. ಒಳಮೀಸಲಾತಿ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾಯಿತು. ಪ್ರಸ್ತುತ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.


ಅನೆ ದಾಳಿ ತಡೆಗೆ ಬ್ಯಾರಿಕೇಡ್
ಚಿಕ್ಕಮಗಳೂರಿನಲ್ಲಿ ಅನೆ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಉತ್ತರಿಸಿ ಅನೆ, ಚಿರತೆ ಮತ್ತು ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮಾನವ- ವನ್ಯಪ್ರಾಣಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ವನ್ಯಜೀವಿಗಳು ಜನ ವಸತಿ ಪ್ರದೇಶಗಳಿಗೆ ಬಾರದಂತೆ ಕಾಡಂಚಿನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾರಿಕೇಡ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಹೇಳಿದರು.


ಅಭಿವೃದ್ಧಿಯೂ ಗ್ಯಾರಂಟಿ
ಗ್ಯಾರಂಟಿ ಯೋಜನೆಗಳ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ರೂ. ವೆಚ್ಚ ಮಾಡಿದರೂ ಅಭಿವೃದ್ಧಿ ಕಾರ್ಯ ಮುಂದುವರಿಯುತ್ತಿದೆ. ಈಗಾಗಲೇ 1.20 ಲಕ್ಷ ಕೋ. ರೂ.ಗಳನ್ನು ಗ್ಯಾರಂಟಿಗಳಿಗೆ ನೀಡಲಾಗಿದೆ ಎಂದರು.


ಸಚಿವರಾಗುವಂತಿಲ್ಲ
ಶಾಸಕರು ಸಚಿವರಾಗಲು ಬಯಸುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಶಾಸಕರು ಸಚಿವರಾಗಬಯಸುವುದು ತಪ್ಪಲ್ಲ. ಆದರೆ, ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿ ಪದವಿ ನೀಡಬಾರದೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದರು.


ಚರ್ಚಿಸಿ ಅನುಮತಿ
ಆಗುಂಬೆ ಘಾಟ್ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ, ಅದಕ್ಕೆ ಸಂಬಂಧಿಸಿದಂತೆ ಪರಿಸರವಾದಿಗಳೊಂದಿಗೆ ಚರ್ಚಿಸಿ ಆ ಬಳಿಕ ಅನುಮತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.


ಥೀಮ್ ಪಾರ್ಕ್ ಪೂರ್ಣ
ಕಾರ್ಕಳದ ಪರುಶರಾಮ ಥೀಂ ಪಾರ್ಕ್ ಮರು ನಿರ್ಮಾಣ ಬಗ್ಗೆ ಪ್ರತಿಕ್ರಿಯೆ ನೀಡಿ, ಅದನ್ನು ಸದ್ಯದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದರು.


ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅವ್ಯವಹಾರ ಪ್ರಕರಣದ ಬಗ್ಗೆ ಮಾತನಾಡಿ, ಕಾರ್ಖಾನೆಯ ಗುಜರಿ ಮಾರಾಟ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಸಿಎಂ ಹೇಳಿದರು.