ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್, ಪ್ರಥಮ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗಾಗಿ ಐದು ದಿನಗಳ 'ಜೀವನ ವಿದ್ಯಾ' ಸನಿವಾಸ ಶಿಬಿರವನ್ನು ಕಳೆದ 16 ವರ್ಷದಿಂದ ನಡೆಸಿಕೊಂಡು ಬಂದಿದ್ದು, ಈ ಬಾರಿಯ ಶಿಬಿರವನ್ನು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಮಂಗಳವಾರ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.ಗೀತಾ ಲೇಖನ ಬರೆದು ಒಪ್ಪಿಸಿದವರಿಗೆ ಪ್ರಮಾಣ ಪತ್ರ ವಿತರಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದರು, ಇಂಥ ಶಿಬಿರ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಭಗವದ್ಗೀತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಶ್ರೇಷ್ಠ ಗ್ರಂಥ. ಲೌಕಿಕ ವಿದ್ಯೆಯೊಂದಿಗೆ ಮನಃಶಾಂತಿ ಪಡೆಯಲು ಆಧ್ಯಾತ್ಮಿಕವಾಗಿ ಬೆಳೆಯುವುದೂ ಅಷ್ಟೇ ಮುಖ್ಯ ಎಂದರು.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವತಿಯಿದ ವಿದ್ಯಾಪೋಷಕ್'ನ 1,000 ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಆರೋಗ್ಯ ಕಾರ್ಡನ್ನು ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ವಿತರಿಸಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಾಹೆ, ಯಕ್ಷಗಾನ ಕಲಾರಂಗದ ಕಾರ್ಯಕ್ರಮಗಳಲ್ಲಿ ಸದಾ ಕೈ ಜೋಡಿಸುತ್ತದೆ ಎಂದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.
ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಎಸ್. ವೆಂಕಟೇಶ್, ನಂದಾ ವೆಂಕಟೇಶ್, ಸಿ.ವಿ.ಸಂತೋಷ್, ಭಾಸ್ಕರ ಭಟ್, ಸಿ.ಎಸ್. ರಾವ್, ಪಿ. ಸತೀಶ ರಾವ್ ಶಿಬಿರದ ನಿರ್ದೇಶಕರಾದ ಗುರುದತ್ ಬಂಟ್ವಾಳಕರ್ ಮತ್ತು ಸಹನಾ ಕಿಣಿ ಅಭ್ಯಾಗತರಾಗಿದ್ದರು.
ಉಪಾಧ್ಯಕ್ಷರಾದ ಎಸ್. ವಿ. ಭಟ್ ಮತ್ತು ವಿ. ಜಿ. ಶೆಟ್ಟಿ ವಿದ್ಯಾ ಪ್ರಸಾದ್, ಯು.ಎಸ್. ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಅಶೋಕ ಎಂ., ಮಂಜುನಾಥ ಹೆಬ್ಬಾರ್, ಅಜಿತ್ ಕುಮಾರ್, ಆನಂದ ಶೆಟ್ಟಿ, ಎನ್. ರಾಮ ಭಟ್, ಪ್ರಭಾಕರ ಬಂಡಿ ಉಪಸ್ಥಿತರಿದ್ದರು.
ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ವಂದಿಸಿದರು
ಮಂಗಳೂರಿನ ಪ್ರೊಟೊ ಅಪ್ ಸ್ಕಿಲ್ ನಿರ್ಷೇಶನದಲ್ಲಿ ನಡೆಯುವ ಐದು ದಿನಗಳ ಸನಿವಾಸ ಶಿಬಿರದಲ್ಲಿ ಪ್ರಥಮ ಪಿಯು ಮುಗಿಸಿದ ವಿದ್ಯಾಪೋಷಕ್'ನ 250 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಬಿರಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಜೀವನ ಕೌಶಲ, ಆಂಗ್ಲಭಾಷಾ ಪ್ರೌಢಿಮೆ ಬೆಳೆಸಿ, ಅವರಿಗೆ ಸಾಧಕ ವ್ಯಕ್ತಿಗಳ ಪರಿಚಯದೊಂದಿಗೆ ಜೀವನ ಮೌಲ್ಯಗಳನ್ನು ಕಲಿಸಲಾಗುವುದು.